ಚೆನ್ನೈ, ಫೆ 16 (DaijiworldNews/DB): ಡಿಎಂಕೆ ಕೌನ್ಸಿಲರ್ ಮತ್ತು ಸಹಚರರಿಂದ ಹಲ್ಲೆಗೀಡಾಗಿದ್ದ 29 ವರ್ಷದ ಯೋಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೋಚಂಪಳ್ಳಿಯಲ್ಲಿ ನಡೆದಿದೆ.
ಪ್ರಭು (29) ಮೃತ ಯೋಧ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ರಜೆಯಲ್ಲಿ ಊರಿಗೆ ಬಂದಿದ್ದ ವೇಳೆ ಕುಡಿಯುವ ನೀರಿಗೆ ಸಂಬಂಧಿಸಿ ಯೋಧ ಪ್ರಭು ಮತ್ತು ಕೌನ್ಸಿಲರ್ ಆರ್. ಚಿನ್ನಸ್ವಾಮಿ ನಡುವೆ ಗಲಾಟೆಯಾಗಿತ್ತು. ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಬಳಿ ಯೋಧನ ಕುಟುಂಬದವರು ಬಟ್ಟೆ ತೊಳೆಯುತ್ತಿದ್ದುದನ್ನು ಕೌನ್ಸಿಲರ್ ಆಕ್ಷೇಪಿಸಿದ್ದ. ಇದರಿಂದ ಯೋಧನ ಪತ್ನಿ ಮತ್ತು ಕೌನ್ಸಿಲರ್ ನಡುವೆ ಜಗಳವಾಗಿದ್ದು, ಮಧ್ಯ ಪ್ರವೇಶಿಸಿದ ಯೋಧ ಮತ್ತು ಅವರ ಸಹೋದರನ ಮೇಲೆ ಕೌನ್ಸಿಲರ್ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡ ಯೋಧ ಪ್ರಭು ಅವರನ್ನು ಸನಿಹದ ಹೊಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯೋಧ ಪ್ರಭು ಅವರ ಸಹೋದರ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಭಾಕರನ್ ಕೂಡಾ ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧಿಸಿ ಕೃಷ್ಣಗಿರಿ ಪೊಲೀಸರು ಡಿಎಂಕೆ ಕೌನ್ಸಿಲರ್ ಚಿನ್ನಸ್ವಾಮಿ ಸೇರಿ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.
ಘಟನೆ ಬಗ್ಗೆ ಡಿಎಂಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ತಮ್ಮದೇ ಊರಿನಲ್ಲಿ ಯೋಧನಿಗೆ ರಕ್ಷಣೆ ಇಲ್ಲದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.