ಒಡಿಸ್ಸಾ, ಫೆ 16 (DaijiworldNews/HR): ಒಡಿಸ್ಸಾದ ಬಿಜೆಪಿ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜೈ ನಾರಾಯಣ್ ಮಿಶ್ರಾ, ಮಹಿಳಾ ಇನ್ಸ್ಪೆಕ್ಟರ್ ಒಬ್ಬರನ್ನು ಹಿಡಿದು ತಳ್ಳಿದ್ದಲ್ಲದೆ ನಿನಗೆ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಬಲ್ಪುರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಧನುಪಾಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಇನ್ ಚಾರ್ಜ್ ಅನಿತಾ ಪ್ರಧಾನ್ ಅವರೊಂದಿಗೆ ಮಾತಿನ ಚಕಮಕಿ ನಡೆಸುವ ಜೈ ನಾರಾಯಣ್ ಮಿಶ್ರಾ ಬಳಿಕ ಅವರನ್ನು ತಳ್ಳಿ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಜೈ ನಾರಾಯಣ್ ಮಿಶ್ರಾ, ನಾನು ಆಕೆಯನ್ನು ತಳ್ಳಿಲ್ಲ. ಪ್ರತಿಭಟನಾ ನಿರತ ಮಹಿಳೆಯರ ಜೊತೆ ಇನ್ಸ್ಪೆಕ್ಟರ್ ಅನುಚಿತವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದೆ ಎಂದಿದ್ದಾರೆ.