ನವದೆಹಲಿ, ಫೆ 16 (DaijiworldNews/DB): ನಾಲ್ಕು ವರ್ಷಗಳಿಂದ ಸಂಬಂಧದಲ್ಲಿದ್ದ ಸ್ನೇಹಿತೆಯನ್ನು ಆಕೆಯ ಲಿವ್ ಇನ್ ಸಂಗಾತಿ ಸಾಹಿಲ್ ಗೆಹ್ಲೋಟ್ ತನ್ನ ಮದುವೆ ಕಾರ್ಯದ ನಡುವೆಯೇ ಕೊಂದಿದ್ದನಲ್ಲದೆ ಆಕೆಯ ಫೋನ್ ಡೇಟಾಗಳನ್ನೆಲ್ಲ ಅಳಿಸಿ ಹಾಕಿದ್ದ ಎಂಬ ಸಂಗತಿಯನ್ನು ಪೊಲೀಸರು ಹೇಳಿದ್ದಾರೆ.
ಫೆಬ್ರವರಿ 9ರಂದು ಸಾಹಿಲ್ ನಿಕ್ಕಿ ಯಾದವ್ಳನ್ನು ಕೊಲೆಗೈದಿದ್ದಾನೆ. ಆತನ ನಿಶ್ಚಿತಾರ್ಥ ಮತ್ತು ವಿವಾಹದ ನಡುವೆ ಈ ಕೊಲೆ ನಡೆದಿದೆ. ನಿಶ್ಚಿತಾರ್ಥದ ನಂತರ ತನ್ನ ಸೋದರ ಸಂಬಂಧಿಯ ಕಾರು ತೆಗೆದುಕೊಂಡು ತಡರಾತ್ರಿ 1 ಗಂಟೆ ಸುಮಾರಿಗೆ ಆತ ನಿಕ್ಕಿ ಮನೆಗೆ ತೆರಳಿದ್ದಲ್ಲದೆ, ಅಪಾರ್ಟ್ಮೆಂಟ್ಗೆ ಪ್ರವೇಶಿಸುತ್ತಿರುವುದು, ಮುಂಜಾನೆ 5 ಗಂಟೆಯ ಸುಮಾರಿಗೆ ಇಬ್ಬರೂ ಹೊರಟು ಹೋಗುತ್ತಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಇನ್ನು ಇವರಿಬ್ಬರೂ ಗೋವಾ, ಹಿಮಾಚಲ ಪ್ರದೇಶಕ್ಕೆ ಹೋಗಲು ಬಯಸಿದ್ದರು. ಪ್ರವಾಸಕ್ಕೆ ಒಟ್ಟಿಗೆ ಹೋಗುವುದಾಗಿ ಭರವಸೆ ನೀಡಿ ಆಕೆಯನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದ. ಆದರೆ ಟಿಕೆಟ್ ಸಿಗದ ಕಾರಣ ಇದು ರದ್ದಾಗಿತ್ತು. ಬಳಿಕ ಕಾಶ್ಮೀರ ಗೇಟ್ ಬಳಿ ಕಾರು ನಿಲ್ಲಿಸಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕಾರಿನಲ್ಲೇ ಕೇಬಲ್ ಡೇಟಾದಿಂದ ಕತ್ತು ಹಿಸುಕಿ ಆಕೆಯನ್ನು ಹತ್ಯೆಗೈದಿದ್ದಾನೆ. ಬಳಿಕ ಆಕೆಯ ಶವದೊಂದಿಗೆ 40 ಕಿಲೋ ಮೀಟರ್ ಸಾಗಿ ತನ್ನ ಢಾಬಾದ ಫ್ರಿಡ್ಜ್ನಲ್ಲಿ ಶವ ಇಟ್ಟಿದ್ದಾನೆ. ಬಳಿಕ ಢಾಬಾದ ಬಾಗಿಲು ಹಾಕಿ ಮದುವೆ ಸಮಾರಂಭಕ್ಕಾಗಿ ಮನೆಗೆ ತೆರಳಿದ್ದಾನೆ. ಮೃತದೇಹವನ್ನು ನದಿಯಲ್ಲಿ ಬಿಸಾಡುವುದು ಆತನ ಉದ್ದೇಶವಾಗಿತ್ತು ಎಂದು ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಾಹಿಲ್ ಮತ್ತು ನಿಕ್ಕಿ ಫಾರ್ಮಾಸ್ಯುಟಿಕಲ್ ಕಾಲೇಜು ಪ್ರವೇಶ ಪರೀಕ್ಷೆ ತೆಗೆದುಕೊಳ್ಳುವ ವೇಳೆ ಭೇಟಿಯಾಗಿ ಬಳಿಕ ಪರಿಚಯ, ಸ್ನೇಹ ಶುರುವಾಗಿದೆ. 2018ರಿಂದ ಒಟ್ಟಿಗೇ ವಾಸಿಸಲಾರಂಭಿಸಿದ್ದರು. ಆದರೆ ಬೇರೊಬ್ಬ ಮಹಿಳೆಯೊಂದಿಗೆ ಆತನ ನಿಶ್ಚಿತಾರ್ಥ ಮಾಡಿಕೊಂಡಿರುವುದು ಆಕೆಗೆ ತಿಳಿದಿರಲಿಲ್ಲ. ಇನ್ನು ಸ್ಥಳೀಯರ ಪ್ರಕಾರ ತನ್ನ ಮದುವೆ ಸಮಾರಂಭದಲ್ಲಿ ಸ್ನೇಹಿತರೊಂದಿಗೆ ಸೇರಿಕೊಂಡು ಡ್ಯಾನ್ಸ್ ಕೂಡಾ ಮಾಡಿದ್ದ. ಸಾಕಷ್ಟು ಸಂಭ್ರಮಿಸಿದ್ದ ಎಂದೂ ಹೇಳಿದ್ದಾರೆ.
ಸಾಹಿಲ್ ನಿಕ್ಕಿಯ ಮೊಬೈಲ್ ಫೋನ್ನ್ನು ತನ್ನೊಂದಿಗೇ ಇರಿಸಿಕೊಂಡಿದ್ದ. ತನ್ನ ಕೃತ್ಯದ ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು ಆಕೆಯ ಮೊಬೈಲ್ ಮತ್ತು ತನ್ನ ಮೊಬೈಲ್ನಲ್ಲಿದ್ದ ಎಲ್ಲಾ ಡೇಟಾಗಳನ್ನು ಅಳಿಸಿ ಹಾಕಿದ್ದಾನೆ. ಸದ್ಯ ಆಕೆಯ ಮೊಬೈಲ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.