ಸುರೇಂದ್ರನಗರ, ಫೆ 16 (DaijiworldNews/DB): ಸರ್ಕಾರಿ ಆದೇಶ ಉಲ್ಲಂಘಿಸಿ ರಾಜಕೀಯ ಭಾಷಣ ಮಾಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್ ವಿರುದ್ದ ಗುಜರಾತಿನ ಸುರೇಂದ್ರನಗರದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
2017ರ ಗುಜರಾತ್ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಗ್ರಾಮವೊಂದರಲ್ಲಿ ಅವರು ಸರ್ಕಾರಿ ನಿಯಮ ಉಲ್ಲಂಘನೆ ಮಾಡಿ ರಾಜಕೀಯ ಭಾಷಣ ಮಾಡಿದ್ದರು. ಸಭೆ ಆಯೋಜನೆಗೆ ವಿಧಿಸಲಾಗಿದ್ದ ಷರತ್ತು ಉಲ್ಲಂಘಿಸಿ ಹಾರ್ದಿಕ್ ಪಟೇಲ್ ಮತ್ತು ಇನ್ನೊಬ್ಬ ಆರೋಪಿ ಕೌಶಿಕ್ ಪಟೇಲ್ ಸಭೆ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಯ ವೇಳೆ ಹಾರ್ದಿಕ್ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಜೆಎಂ ನ್ಯಾಯಾಧೀಶ ಡಿ.ಡಿ.ಶಾ ಅವರು ಹಾರ್ದಿಕ್ ವಿರುದ್ದ ಬಂಧನ ವಾರಂಟ್ ಹೊರಡಿಸಿದ್ದಾರೆ. ಮುಂದಿನ ವಿಚಾರಣೆಗೆ ಅವರ್ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಧ್ರಾಂಗದರಾ ಪೊಲೀಸ್ ಠಾಣೆಯ ಅಧಿಕಾರಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಗುಜರಾತಿನಲ್ಲಿ ಹಾರ್ದಿಕ್ ಪಟೇಲ್ ವಿರುದ್ಧ ಎರಡು ದೇಶದ್ರೋಹ ಪ್ರಕರಣ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.