ಬೆಂಗಳೂರು, ಫೆ 17 (DaijiworldNews/MS): 2023-24ನೇ ಸಾಲಿನ ರಾಜ್ಯ ಬಜೆಟ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡನೆ ಮಾಡುತ್ತಿದ್ದಾರೆ.
ಬಜೆಟ್ ಗಾತ್ರ 3 ಲಕ್ಷ 7 ಸಾವಿರ ಕೋಟಿ ರೂ.ಇದ್ದು, ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಟ್ ಮಂಡಿಸಲಾಗುತ್ತಿದೆ. ಈ ಬಜೆಟ್ ಮುಂದಿನ 25 ವರ್ಷ ದೂರದೃಷ್ಟಿ ಹೊಂದಿದೆ. ಈ ಬಜೆಟ್ ಉತ್ತಮ ಬದುಕಿನ ಭರವಸೆಯಾಗಿದೆ ಎಂದು ಹೇಳಿದ್ದಾರೆ.
ಸೀಮೆ ಎಣ್ಣೆ ಆಧಾರಿತ ದೋಣಿಗಳನ್ನು ಪೆಟ್ರೋಲ್ ದೋಣಿಗಳನ್ನಾಗಿ ಪರಿವರ್ತಿಸಲು 40 ಕೋಟಿ ರೂ. ಮೀಸಲಿಡಲಾಗುವುದು. ಇದು ಪರಿವರ್ತನೆಯಾಗುವ ವರೆಗೂ ಸೀಮೆಎಣ್ಣೆ ಸಹಾಯಧನ ಮುಂದುವರಿಸಲಾಗುವುದು.
ಆಳ ಸಮುದ್ರ ಮೀನುಗಾರಿಕೆಗೆ ಮತ್ಸ್ಯಸಿರಿ ಎಂಬ ಯೋಜನೆ ಆರಂಭಿಸಲಾಗಿದೆ.
ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಜತೆ ಸಮನ್ವಯಗೊಳಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ. ಮೀನುಗಾರಿಕೆ ಉತ್ತೇಜನಕ್ಕೆ ಕಾರವಾರದ ಬಳಿ ಸೀ ಫುಡ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಆರ್ಟಿಫಿಶೀಯಲ್ ರಿಫ್ ಸ್ಥಾಪನೆ (ಕೃತಕ ಬಂಡೆಗಳ ಮೂಲಕ ) ಮಾಡಲಾಗುವುದು ಎಂದು ಹೇಳಿದ್ದಾರೆ.
ದೋಣಿಗಳಿಗೆ ಮೋಟಾರ್ ಇಂಜಿನ್ ಅಳವಡಿಕೆ. ನೇಕಾರರು, ಮೀನುಗಾರರಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ, ಇಸ್ರೋ ಅಭಿವೃದ್ದಿಪಡಿಸಿದ ಜಿಪಿಎಸ್ ದೋಣಿಗಳಿಗೆ ಅಳವಡಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.