ಬೆಂಗಳೂರು, ಫೆ 17 (DaijiworldNews/HR): ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರೈತರಿಗೆ ಬಂಪರ್ ಅನುದಾನ ಘೋಷಣೆಮಾಡಿದ್ದು,ಅಡಿಕೆ ಬೆಳೆಯ ರೋಗ ನಿರ್ವಹಣೆಗೆ ನೂತನ ತಂತ್ರಜ್ಞಾನ ಅಭಿವೃದ್ಧಿಗೆ 10 ಲಕ್ಷ ಕೋಟಿ ರೂ. ಅನುದಾನ ಘೋಷಿದ್ದು, ದ್ರಾಕ್ಷಿ ಬೆಳೆಗಾರರಿಗೆ 100 ಕೋಟಿ ರೂ. ನೆರವು ಯೋಜನೆ ಆರಂಭಿಸಲಾಗುವುದು. ಜತೆಗೆ, ರೇಷ್ಮೆ ಬೆಳೆ 10 ಸಾವಿರ ಹೆಕ್ಟೇರ್ಗೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ. ನೀಡಿದೆ. ಬಿತ್ತನೆಬೀಜ, ರಸಗೊಬ್ಬರ ಇತ್ಯಾದಿಗಳಿಗಾಗಿ 962 ಕೋಟಿ ರೂ. ವ್ಯಯಿಸಲಾಗಿದೆ. ರಾಜ್ಯದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಪರಿಹಾರ ಹೆಚ್ಚಿಸಿ ದಾಖಲೆ ಅವಧಿಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮೆ ಮಾಡಲಾಗಿದೆ. 14 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಪರಿಹಾರದ ಹಣ ವರ್ಗಾಯಿಸಲಾಗಿದೆ.
ಇನ್ನು ಭೂಸಿರಿ ಎಂಬ ನೂತನ ಯೋಜನೆ ಅಡಿ 10,000 ರೂ. ಸಹಾಯಧನ ನೀಡಲು ಉದ್ದೇಶಿಸಲಾಗಿದೆ. ರೈತ ಸಿರಿ ಯೋಜನೆಯಡಿಯಲ್ಲಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟರ್ಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ಘೋಷಣೆ. ಸಹ್ಯಾದ್ರಿ ಯೋಜನೆಯಡಿಯಲ್ಲಿ ಕರಾವಳಿ ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ ನಾಳ ಅಭಿವೃದ್ಧಿ ಕಾಮಗಾರಿಗೆ 75 ಕೋಟಿ ರೂ. ಅನುದಾನ ಮೀಸಲಿಡಲಾಗುವುದು ಎಂದು ಸಿಎಂ ಘೋಷಣೆ
ಈ ಬಾರಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂ. ಸಾಲ ಘೋಷಿಸಿದ್ದು, 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ 25 ಸಾವಿರ ಕೋಟಿ ಸಾಲ, ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ, 2023-24ನೇ ಸಾಲಿನಿಂದ ಹೆಚ್ಚುವರಿಯಾಗಿ 10 ಸಾವಿರ ರೂ ಸಹಾಯಧನ ಘೋಷಿಸಿದ್ದಾರೆ.