ನವದೆಹಲಿ, ಫೆ 17 (DaijiworldNews/MS): ಭೂಕಂಪದಿಂದ ತತ್ತರಿಸಿದ್ದ ಟರ್ಕಿ ದೇಶಕ್ಕೇ ಭಾರತ ʻಆಪರೇಷನ್ ದೋಸ್ತ್ʼ ಹೆಸರಲ್ಲಿ ಸಹಾಯಹಸ್ತ ಚಾಚಿತ್ತು. ಇದೀಗ ತನ್ನ 10 ದಿನಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಭಾರತದ 47 ಯೋಧರನ್ನೊಳಗೊಂಡ ಎನ್ಡಿಆರ್ಎಫ್ ತಂಡ ತನ್ನೊಂದಿಗೆ ಟರ್ಕಿಗೆ ತೆರಳಿದ್ದ ರ್ಯಾಂಬೋ ಮತ್ತು ಹನಿ ಎಂಬ ಎರಡು ಶ್ವಾನಗಳೊಂದಿಗೆ ಶುಕ್ರವಾರ ಭಾರತಕ್ಕೆ ವಾಪಾಸಾಗಿದೆ.
ರಕ್ಷಣಾ ಕಾರ್ಯಾಚರಣೆಗಳಿಗೆ ವಿಶೇಷ ತರಬೇತಿ ಪಡೆದಿರುವ ಲಾಬ್ರೋಡಾರ್ ತಳಿಯ ಜೂಲಿ, ರೋಮಿಯೋ, ಹನಿ ಮತ್ತು ರಾಂಬೋ ನಾಲ್ಕು ಶ್ವಾನಗಳು ಎರಡು ಪ್ರತ್ಯೇಕ ಎನ್ಡಿಆರ್ಎಫ್ ತಂಡಗಳ ಜೊತೆಗೆ ಟರ್ಕಿಗೆ ತೆರಳಿತ್ತು.
ಟರ್ಕಿಯಲ್ಲಿ ಅವಶೇಷಗಳ ಅಡಿಯಿಂದ 30,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಿದ ನಂತರ NDRF ಸಿಬ್ಬಂದಿ ಹಿಂಡನ್ ವಿಮಾನ ನಿಲ್ದಾಣದ ಮೂಲಕ ಹಿಂತಿರುಗಿದ್ದು ಇವರಿಗೆ ಆತ್ಮೀಯವಾಗಿ ಸ್ವಾಗತ ನೀಡಲಾಯಿತು.
ಯಂತ್ರಗಳಿಂದಲೂ ಹುಡುಕಲು ಸಾಧ್ಯವಾಗದೇ ಇದ್ದಾಗ ಭಾರತದ ರೋಮಿಯೋ ಮತ್ತು ಜೂಲಿ ಕಟ್ಟಡದ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದ 6 ವರ್ಷದ ಬಾಲಕಿಯನ್ನು ರಕ್ಷಿಸಿದ್ದು ವಿಶ್ವದ ಗಮನ ಸೆಳೆದಿತ್ತು. ಭಾರತೀಯ ಸ್ನಿಫರ್ ನಾಯಿಗಳು, "ಅನಾಮಿಕ ವೀರರು" ಎಂದು ಕರೆಯಲ್ಪಟ್ಟಿವೆ.