ನವದೆಹಲಿ, ಫೆ 18 (DaijiworldNews/HR): ನಿಕ್ಕಿ ಯಾದವ್ ಹತ್ಯೆ ಪ್ರಕರಣದಲ್ಲಿ ಪಿತೂರಿಯಲ್ಲಿ ತನ್ನ ಮಗನಿಗೆ ಸಹಾಯ ಮಾಡಿದ ಆರೋಪದ ಮೇಲೆ ಪ್ರಮುಖ ಆರೋಪಿ ಸಾಹಿಲ್ ಗೆಹ್ಲೋಟ್ ತಂದೆ ಸೇರಿದಂತೆ ದೆಹಲಿ ಪೊಲೀಸರು ಐವರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಸಾಹಿಲ್ನ ತಂದೆ ವೀರೇಂದ್ರ ಸಿಂಗ್, ಸೋದರ ಸಂಬಂಧಿಗಳಾದ ಆಶಿಶ್ ಮತ್ತು ನವೀನ್ ಮತ್ತು ಆತನ ಸ್ನೇಹಿತರಾದ ಅಮರ್ ಮತ್ತು ಲೋಕೇಶ್ ಅವರನ್ನು ಕೊಲೆಯಲ್ಲಿ ಪಾತ್ರವಹಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಕ್ರೈಂ ಬ್ರಾಂಚ್ ವರದಿ ತಿಳಿಸಿದೆ.
ವೀರೇಂದ್ರ ಸಿಂಗ್ ಗೆ ತನ್ನ ಮಗನ ಕೃತ್ಯದ ಬಗ್ಗೆ ತಿಳಿದಿತ್ತು ಎಂಬ ವಿಚಾರ ತಿಳಿದ ನಂತರ ಅವರನ್ನು ಬಂಧಿಸಲಾಗಿದೆ. ಆತನ ವಿರುದ್ಧ ಐಪಿಸಿಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ನಿಕ್ಕಿ ಯಾದವ್ ಅವರನ್ನು ಸಾಹಿಲ್ ಗೆಹ್ಲೋಟ್ ಕತ್ತು ಹಿಸುಕಿ ಕೊಲೆ ಮಾಡಿದ್ದು, ಮಂಗಳವಾರ ಆತನ ಬಂಧನವಾಗಿದ್ದು, ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಸಾಹಿಲ್ ಮತ್ತು ನಿಕ್ಕಿ ಅಕ್ಟೋಬರ್ 2020ರಲ್ಲೇ ನೋಯ್ಡಾದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದು, ಈ ಮದುವೆ ಬಗ್ಗೆ ಸಾಹಿಲ್ ಕುಟುಂಬ ಅಸಮಾಧಾನ ವ್ಯಕ್ತಪಡಿಸಿತ್ತು ಎಂದು ತಿಳಿದುಬಂದಿದೆ.
ಪೊಲೀಸರು ಮದುವೆ ಪ್ರಮಾಣಪತ್ರವನ್ನೂ ಪತ್ತೆ ಮಾಡಿದ್ದು, ಸಾಹಿಲ್ ಸ್ನೇಹಿತರು ಮತ್ತು ಸೋದರ ಸಂಬಂಧಿಗಳು, ನಿಕ್ಕಿ ಮೃತದೇಹವನ್ನು ಫ್ರಿಡ್ಜ್ನಲ್ಲಿ ಬಚ್ಚಿಡಲು ನೆರವು ನೀಡಿದ್ದರು ಎನ್ನಲಾಗಿದೆ.