ನವದೆಹಲಿ, ಫೆ 18 (DaijiworldNews/DB): ನಿರಂತರವಾಗಿ ಕರೆ ಡ್ರಾಪ್ ಮತ್ತು ಡೇಟಾ ಸ್ಥಗಿತದಂತಹ ಪ್ರಕರಣ ಬಗ್ಗೆ ವರದಿ ನೀಡುವಂತೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಟೆಲಿಕಾಂ ಕಂಪೆನಿಗಳಿಗೆ ನಿರ್ದೇಶನ ನೀಡಿದೆ.
ಗ್ರಾಹಕರಿಂದ ಟೆಲಿಕಾಂ ಕಂಪೆನಿಗಳ ಸೇವಾ ವ್ಯತ್ಯಯಗಳ ಕುರಿತು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ. ಅಲ್ಲದೆ ಗ್ರಾಹಕರಿಗೆ ನೀಡುವ ಸೇವೆಯಲ್ಲಿರುವ ಸಮಸ್ಯೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಇನ್ನು ಟ್ರಾಯ್ ಅಧಿಕಾರಿಗಳು ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾಗಳ ಪ್ರಮುಖರೊಂದಿಗೆ ಶುಕ್ರವಾರ ಸಭೆ ನಡಸಿದ್ದಾರೆ. ಸೇವಾ ಗುಣಮಟ್ಟ, 5ಜಿ ನಿಯಮ ಸೇರಿದಂತೆ ವಿವಿಧ ವಿಚಾರಗಳ ಕುರಿತು ಇಲ್ಲಿ ಚರ್ಚೆ ನಡೆಸಲಾಗಿದೆ. ಸಭೆಯ ಬಳಿಕ ಮಾತನಾಡಿದ ಟ್ರಾಯ್ ಅಧ್ಯಕ್ಷ ಪಿಡಿ ವಘೇಲಾ, ಕರೆ ಡ್ರಾಪ್, ಸೇವಾ ಗುಣಮಟ್ಟದಲ್ಲಿನ ನ್ಯೂನತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸೇವಾ ಗುಣಮಟ್ಟವನ್ನು ತತ್ಕ್ಷಣದಿಂದಲೇ ಕಾಯ್ದುಕೊಳ್ಳುವಂತೆ ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.
ಸಮಸ್ಯೆ ಯಾವ ಪ್ರದೇಶಗಳಲ್ಲಿ ಹೆಚ್ಚಿದೆ ಎಂದು ಗುರುತಿಸಿ ಅದಕ್ಕೆ ಪರಿಹಾರ ಕಂಡು ಕೊಳ್ಳುವುದು ಅಗತ್ಯ. ಹೀಗಾಗಿ ಶೀಘ್ರ ಈ ಸಂಬಂಧ ವರದಿ ನೀಡುವಂತೆ ಸೂಚಿಸಲಾಗಿದೆ. ಸೇವಾ ಗುಣಮಟ್ಟ ಯಾವುದೇ ಕಾರಣಕ್ಕೂ ಕುಸಿಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ. 5ಜಿ ರೋಲೌಟ್ ಬಳಿಕವೂ ಸಮಸ್ಯೆಗಳು, ವಿಶೇಷವಾಗಿ ನೆಟ್ವರ್ಕ್ ಸಂಬಂಧಿ ಸಮಸ್ಯೆಗಳು ಇರುವುದಾಗಿ ಟೆಲಿಕಾಂ ಕಂಪೆನಿಗಳು ಒಪ್ಪಿಕೊಂಡಿವೆ.