ನವದೆಹಲಿ, ಫೆ 18 (DaijiworldNews/DB): ಚೀನಾ ಮತ್ತು ಭಾರತಕ್ಕೆ ಸೇರಿದ ಉತ್ತರ ಗಡಿಯಲ್ಲಿ ನಿಯೋಜಿಸಲಾಗಿದ್ದ ಭಾರತದ ಯೋಧನೊಬ್ಬ ಅಲ್ಲಿನ ಸೇನಾ ಚಟುವಟಿಕೆಗಳ ರಹಸ್ಯ ಮಾಹಿತಿಯನ್ನು 15 ಸಾವಿರ ರೂ.ಗಳಿಗೆ ಪಾಕಿಸ್ತಾನದ ರಾಯಭಾರಿ ಕಚೇರಿಯ ಐಎಸ್ಐ ಏಜೆಂಟ್ಗೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯಲ್ಲಿ ನಿಯೋಜನೆಗೊಂಡಿರುವ ಪಾಕಿಸ್ತಾನಿ ಪ್ರಜೆ ಅಬಿದ್ ಹುಸೇನ್ ಅಲಿಯಾಸ್ ನಾಯಕ್ ಅಬೀದ್ ಎಂಬಾತನಿಗೆ ಈ ಯೋಧ ಕೇವಲ 15 ಸಾವಿರ ರೂ.ಗಳಿಗೆ ಸೇನಾ ನೆಲೆಯ ರಹಸ್ಯ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ. ಈ ವೇಳೆ ಆತ ಸಿಕ್ಕಿ ಬಿದ್ದಿದ್ದು, ಬಂಧನಕ್ಕೊಳಗಾಗಿದ್ದಾನೆ. ಸೇನಾ ನಿಯಮಗಳನುಸಾರ ಆತನ ವಿರುದ್ದ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾ ಭಾರತದ ಮೇಲೆ ಆಕ್ರಮಣಕ್ಕೆ ಯತ್ನಿಸುತ್ತಿರುವಾಗಲೇ ಭಾರತೀಯ ಸೇನೆಗೆ ಸೇರಿದ ಯೋಧ ಪಾಕ್ ಮೂಲದ ಗೂಢಾಚಾರರಿಗೆ ಸೇನಾ ನೆಲೆಯ ರಹಸ್ಯ ಮಾಹಿತಿಗಳನ್ನು ರವಾನಿಸಿದ ಈ ಘಟನೆ ಭೀತಿಗೆ ಕಾರಣವಾಗಿದೆ. ಆದರೆ ಸೇನೆಯು ಇಂತಹ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ತೋರಿಸುತ್ತದೆ. ತಪ್ಪಿತಸ್ಥನಿಗೆ ಶಿಕ್ಷೆ ಖಂಡಿತಾ ಎಂದು ಸೇನಾ ಮೂಲಗಳು ತಿಳಿಸಿವೆ.