ಗಾಂಧಿನಗರ, ಫೆ 19 (DaijiworldNews/DB): ಸೋದರಳಿಯನ ಮದುವೆಗೆ ಆಗಮಿಸಿದ ಅತಿಥಿಗಳತ್ತ ಮಾಜಿ ಸರಪಂಚ್ವೊಬ್ಬರು ನೋಟಿನ ಕಂತೆ ಎಸೆದ ಪ್ರಸಂಗ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ನೆರೆದಿದ್ದವರು ಸಿಕ್ಕಿದ್ದೇ ಚಾನ್ಸ್ ಎಂದು ನೋಟುಗಳನ್ನು ಹೆಕ್ಕಿದ್ದಾರೆ.
ಮೆಹ್ಸಾನಾ ಜಿಲ್ಲೆಯ ಕೇಕ್ರಿ ತಹಸಿಲ್ನಲ್ಲಿರುವ ಅಗೋಲ್ ಗ್ರಾಮದಲ್ಲಿ ಮಾಜಿ ಸರಪಂಚ್ ಕರೀಂ ಯಾದವ್ ಅವರ ಸೋದರಳಿಯನ ಮದುವೆ ನಡೆದಿತ್ತು. ಮದುವೆಗೆ ಬಂದ ಅತಿಥಿಗಳಿಗೆ ಹೊಟ್ಟೆ ತುಂಬ ಊಟ ಹಾಕಿದ್ದಾರೆ. ಇಷ್ಟೇ ಆಗಿದ್ದರೆ ಅತಿಥಿಗಳು ಊಟ ಮಾಡಿ ಹೊರಡುತ್ತಿದ್ದರು. ಆದರೆ ಸೋದರಳಿಯನ ಮದುವೆ ಇನ್ನಷ್ಟು ಅದ್ದೂರಿಯಾಗಿ ಜನರ ಮನಸ್ಸಿನಲ್ಲಿ ಸ್ಮರಣೀಯವಾಗಿ ಉಳಿಯಬೇಕೆಂಬ ಕಾರಣಕ್ಕೆ ಕರೀಂ ಯಾದವ್ ಅವರು ಬಂದಿದ್ದ ಅತಿಥಿಗಳ ಕಡೆಗೆ 500 ರೂ. ಮುಖಬೆಲೆಯ ನೋಟುಗಳ ಕಂತೆಗಳನ್ನೇ ಎಸೆದಿದ್ದಾರೆ. ನೋಟಿನ ಮಳೆ ಸುರಿಯುವುದನ್ನು ನೋಡಿದ ಅತಿಥಿಗಳು ನಾ ಮುಂದು, ತಾ ಮುಂದು ಎಂಬಂತೆ ನೋಟು ಹೆಕ್ಕಿಕೊಳ್ಳಲು ಓಡಿದ್ದಾರೆ.
ಇನ್ನು ಕರೀಂ ಯಾದವ್ ಕಟ್ಟಡವೊಂದರ ಮೇಲ್ಬಾಗದಲ್ಲಿ ನಿಂತು ಕೆಳಗಿರುವ ಅತಿಥಿಗಳತ್ತ ನೋಟನ್ನು ಎಸೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನ ಇದಕ್ಕೆ ನಾನಾ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.