ಹುಬ್ಬಳ್ಳಿ, ಫೆ 19 (DaijiworldNews/DB): ಕಾಂಗ್ರೆಸ್ನಲ್ಲಿ ಭ್ರಷ್ಟಾಸುರರು ಹಲವರಿದ್ದಾರೆ. ಆ ಪಕ್ಷದ ಒಳ ಜಗಳ ಬಗೆಹರಿಸಿಕೊಳ್ಳಲು ಮೊದಲು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಮುಂದಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ರಾಜ್ಯದ ಬಗ್ಗೆ ಸುರ್ಜೇವಾಲ ಅವರಿಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನಲ್ಲಿ ಪಟ್ಟಿ ಮಾಡುವುದಾದರೆ ಭ್ರಷ್ಟಾಸುರರು ತುಂಬಾ ಸಿಗುತ್ತಾರೆ. ಅವರ ಪಕ್ಷದಲ್ಲಿ ಆಂತರಿಕ ಜಗಳ ಹೆಚ್ಚುತ್ತಿದೆ. ಅದನ್ನು ಬಗೆಹರಿಸಿಕೊಳ್ಳುವತ್ತ ಅವರು ಮೊದಲು ಯೋಚನೆ ಮಾಡಲಿ. ಬೇಜವಾಬ್ದಾರಿಯಾಗಿ ಮಾತನಾಡುವುದರಿಂದ ಏನೂ ಆಗದು ಎಂದು ತಿರುಗೇಟು ನೀಡಿದರು.
ನಮ್ಮಿಂದ ನಕಲು ಮಾಡಿ ಕೆಲವು ಯೋಜನೆಗಳನ್ನು ಕಾಂಗ್ರೆಸ್ಸಿಗರು ಘೋಷಿಸುತ್ತಿದ್ದಾರೆ. ನಾವು ಗೃಹಿಣಿ ಶಕ್ತಿ ಯೋಜನೆ ಘೋಷಿಸಿದ ಮೇಲೆ ಇವರು ಗೃಹಲಕ್ಷ್ಮಿ ಘೋಷಿಸಿದರು. ಚುನಾವಣೆ ವೇಳೆ ಆಕಾಶ ತೋರಿಸಿ ಜನರನ್ನು ಮರಳು ಮಾಡುವ ಯತ್ನ ಅವರದು ಎಂದು ಬೊಮ್ಮಾಯಿ ಹರಿಹಾಯ್ದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಅನುಷ್ಠಾನಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಕಳೆದ ವರ್ಷ ಬಜೆಟ್ನಲ್ಲಿ ಘೋಷಿಸಿದ ತೊಂಬತ್ತು ಪ್ರತಿಶತ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.