ಬಿಹಾರ, ಫೆ 19 (DaijiworldNews/DB): ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ ಆಗಿದ್ದರಿಂದ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಸುಮಾರು 2 ಕಿಮೀಗಳಷ್ಟು ದೂರ ಓಡಿ ಪರೀಕ್ಷಾ ಕೇಂದ್ರವನ್ನು ತಲುಪಿದ ಪ್ರಸಂಗ ಬಿಹಾರದಲ್ಲಿ ನಡೆದಿದೆ.
ಬಿಹಾರ ಬೋರ್ಡ್ ಮೆಟ್ರಿಕ್ಸ್ ಪರೀಕ್ಷೆ (10ನೇ ತರಗತಿ ಪರೀಕ್ಷೆ) ಬರೆಯಲು ಸುಮಾರು 12 ಮಂದಿ ವಿದ್ಯಾರ್ಥಿನಿಯರು ರಸ್ತೆಯುದ್ದಕ್ಕೂ ಓಡಿದ್ದಾರೆ. ಕೊನೆಗೂ ಪರೀಕ್ಷೆ ಪ್ರಾರಂಭವಾಗುವುದಕ್ಕೆ ಮುಂಚೆಯೇ ಪರೀಕ್ಷಾ ಕೇಂದ್ರಕ್ಕೆ ತಲುಪಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-2ರಲ್ಲಿ ವಾಹನದಟ್ಟಣೆಯಿಂದ ಗಂಟೆಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿತ್ತು. ಪರೀಕ್ಷೆಗಾಗಿ ವಿದ್ಯಾರ್ಥಿನಿಯರು ಬೈಕ್, ಆಟೋ, ಕಾರಿನಲ್ಲಿ ತಮ್ಮ ಪೋಷಕರೊಂದಿಗೆ ಅದೇ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದರು. ಆದರೆ ಟ್ರಾಫಿಕ್ ಜಾಂನಿಂದಾಗಿ ಮುಂದೆ ಹೋಗಲು ಸಾಧ್ಯವಾಗದೇ ಇದ್ದಾಗ ಪರೀಕ್ಷೆ ಬರೆಯುವುದು ಹೇಗೆಂಬ ಆತಂಕ ವಿದ್ಯಾರ್ಥಿನಿಯರಿಗೆ ಎದುರಾಗಿದೆ. ಸ್ವಲ್ಪ ತಡವಾದರೂ ಪರೀಕ್ಷಾ ಕೇಂದ್ರದೊಳಗೆ ಬಿಡುವುದಿಲ್ಲ ಎಂಬ ಆತಂಕದಿಂದ ಸುಮಾರು 12 ವಿದ್ಯಾರ್ಥಿನಿಯರು ಪೆನ್, ಹಾಲ್ಟಿಕೆಟ್ ಸಹಿತ ಪರೀಕ್ಷೆಗೆ ಅಗತ್ಯವಿದ್ದ ಪರಿಕರಗಳನ್ನು ಹಿಡಿದು ಸುಮಾರು ಎರಡು ಕಿಲೋ ಮೀಟರ್ಗಳಷ್ಟು ದೂರ ಓಡಿ ಪರೀಕ್ಷೆ ಪ್ರಾರಂಭವಾಗುವುದಕ್ಕೆ ಮುನ್ನ ಪರೀಕ್ಷಾ ಕೇಂದ್ರ ತಲುಪಿದ್ದಾರೆ.
ವಿದ್ಯಾರ್ಥಿನಿಯರು ರಸ್ತೆಯಲ್ಲಿ ಓಡುತ್ತಿರುವ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿನಿಯರ ನಡೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಆಡಳಿತ ವರ್ಗದ ವಿರುದ್ದ ಆಕ್ರೋಶವೂ ವ್ಯಕ್ತವಾಗಿದೆ.
ಈ ವಿಚಾರವಾಗಿ ಮಾತನಾಡಿರುವ ಕೈಮೂರು ಜಿಲ್ಲಾ ಶಿಕ್ಷಣಾಧಿಕಾರಿ ಸುಮನಾ ಶರ್ಮಾ, ರಸ್ತೆ ಸರಿಯಾಗಿಲ್ಲದಿದ್ದರಿಂದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಶಾಲಾ ಮಕ್ಕಳು ಸಂಚರಿಸುವ ರಸ್ತೆಯಲ್ಲಿ ಟ್ರಾಫಿಕ್ ಜಾಂ ಆದರೆ ಅವರ ಶೈಕ್ಷಣಿಕ ಬದುಕಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಹಲವು ಬಾರಿ ಸಾರಿಗೆ, ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.