ಕಾರವಾರ, ಫೆ 19 (DaijiworldNews/DB): ನೂರಕ್ಕೆ ನೂರರಷ್ಟು ಆಪರೇಷನ್ ಕಮಲ ನಡೆಯುತ್ತದೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮರ್ಥಿಸಿಕೊಂಡಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು. ಕಾಂಗ್ರೆಸ್ನಲ್ಲಿರುವವರು ನಮ್ಮ ಪಕ್ಷಕ್ಕೆ ಬರುವ ಬಗ್ಗೆ ರಮೇಶ್ ಜಾರಕಿಹೊಳಿ ಬಳಿ ಹೇಳಿರಬಹುದು. ನೀವು ಕರೆದಾಗ ನಾವು ಬರುತ್ತೇವೆ ಎಂದಿರಬಹುದು. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಗೋವಾದಲ್ಲಿ ಕಾಂಗ್ರೆಸ್ನಿಂದ 12, ಬಿಜೆಪಿಯಿಂದ 20 ಶಾಸಕರು ಆಯ್ಕೆಯಾಗಿದ್ದರು. ಆದರೆ ಪಕ್ಷೇತರರ ಬೆಂಬಲದೊಂದಿಗೆ ನಾವು ಅಲ್ಲಿ ಸರ್ಕಾರ ರಚಿಸಿದೆವು. ನಮಗೆ ಬಹುಮತ ಇದ್ದರೂ ಕಾಂಗ್ರೆಸ್ನಿಂದ ಎಂಟು ಶಾಸಕರು ನಮ್ಮ ಪಕ್ಷ ಸೇರ್ಪಡೆಯಾಗಿದ್ದಾರೆ. ಅದೇನು ಅಪರಾಧವಲ್ಲ ಎಂದು ಹೇಳಿದರು.
ಸೈದ್ದಾಂತಿಕವಾಗಿ ಯೋಚಿಸುವವರು ಬಿಜೆಪಿಯಲ್ಲಿರುತ್ತಾರೆ. ವೈಯಕ್ತಿಕ ಲಾಭದ ಲೆಕ್ಕಾಚಾರವಿರುವವರು ಬೇರೆ ಕಡೆ ಹೋಗುತ್ತಾರೆ. ಎಲ್ಲಾ ಸಮುದಾಯಗಳೂ ಅತಿ ಹೆಚ್ಚು ಬೆಂಬಲ ನೀಡುವ ಪಾರ್ಟಿ ನಮ್ಮದು. ನಮ್ಮನ್ನು ಅವರು ಕೈ ಬಿಡುವುದಿಲ್ಲ ಎಂಬ ಖಚಿತತೆ ನಮಗಿದೆ ಎಂದರು.
ಲವ್ ಜಿಹಾದ್ಗೆ ನಿಖರ ವ್ಯಾಖ್ಯಾನ ಇಲ್ಲ ಎಂಬುದಾಗಿ ಗೃಹ ಸಚಿವರು ಯಾವ ಹಿನ್ನೆಲೆಯಾಧಾರಿತವಾಗಿ ಹೇಳಿದ್ದಾರೆಯೋ ಗೊತ್ತಿಲ್ಲ. ಆದರೆ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳುವುದು ಮತ್ತು ಹಿಂದೂ ಹೆಣ್ಣು ಮಕ್ಕಳ ಭವಿಷ್ಯ ಹಾಳುಗೆಡಹುವ ಉದ್ದೇಶದಿಂದ ಲವ್ ಜಿಹಾದ್ ನಡೆಯುತ್ತಿದೆ. ತಮ್ಮ ನಂಬಿಕೆಗಳನ್ನು ಒಪ್ಪದಿರುವವರ ಮೇಲೆ ಯುದ್ದ ಸಾರುವುದೇ ಜಿಹಾದ್. ಹಿಂದೂ ಹೆಸರಿಟ್ಟುಕೊಂಡು ನಮ್ಮ ಹೆಣ್ಣು ಮಕ್ಕಳನ್ನು ನಂಬಿಸಿ ಪ್ರೀತಿಸಿ, ಮತಾಂತರ ಮಾಡಿ ಲವ್ ಜಿಹಾದ್ ಬಲೆಗೆ ಬೀಳಿಸುತ್ತಾರೆ. ನಮ್ಮ ಸಮಾಜದಲ್ಲಿ ಅದಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಸಿ.ಟಿ. ರವಿ ಪ್ರತಿಪಾದಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಈ ಬಾರಿಯ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಈ ಬಗ್ಗೆ ಕೆಲವು ರಾಜಕೀಯ ಪಕ್ಷದವರು ಅನಗತ್ಯ ಗೊಂದಲ ಮೂಡಿಸುತ್ತಿದ್ದಾರೆ. ಅವರ ಮಾತುಗಳನ್ನು ಜನ ನಂಬಬಾರದು ಎಂದರು.