ಬೆಂಗಳೂರು, ಫೆ. 19, (DaijiworldNews/SM): ಲಿಂಗಾಯತ ಸಮುದಾಯದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ ಹೆಚ್ ಡಿ ತಮ್ಮಯ್ಯ ಅವರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರಿಗೆ ತವರಿನಲ್ಲಿ ಹಿನ್ನೆಡೆಯಾಗಿ ಪರಿಣಮಿಸಿದೆ. ಚಿಕ್ಕಮಗಳೂರು ನಗರಸಭೆ ಮಾಜಿ ಅಧ್ಯಕ್ಷರಾಗಿದ್ದ ತಮ್ಮಯ್ಯ, ಸುಮಾರು 15 ವರ್ಷಗಳಿಂದ ಸಿಟಿ ರವಿ ಜೊತೆಯಲ್ಲಿದ್ದರು. ಸ್ವಲ್ವ ಸಮಯದಿಂದ ಅವರನ್ನು ನಿರ್ಲಕ್ಷಿಸಿದ್ದರಿಂದ ಬೇಸತ್ತಿದ್ದರು.
ತಮ್ಮಯ್ಯ ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು ಆದರೆ, ಆನಂದ್ ಅವರನ್ನು ಅಧ್ಯಕ್ಷರನ್ನಾಗಿ ಸಿಟಿ ರವಿ ಮಾಡಿದ್ದರು. ಈ ಮಧ್ಯೆ ಕಾಮಗಾರಿ ಗುತ್ತಿಗೆ ವಿಚಾರದಲ್ಲಿ ರವಿ ಅವರ ಸೋದರ ಸಂಬಂಧಿಯ ಏಕಸ್ವಾಮ್ಯತ್ವದಿಂದ ಸ್ಥಳೀಯ ಬಿಜೆಪಿ ಮುಖಂಡರು ಬೇಸತ್ತಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮಯ್ಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.