ನವದೆಹಲಿ, ಫೆ 20 (DaijiworldNews/HR): ಎಐಎಂಐಎಂ ನಾಯಕ, ಸಂಸದ ಅಸಾದುದ್ದೀನ್ ಓವೈಸಿ ಅವರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ.
ಭಾನುವಾರ ರಾತ್ರಿ ದೆಹಲಿಯಲ್ಲಿರುವ ಅಸಾದುದ್ದೀನ್ ಓವೈಸಿ ಅವರ ಮನೆಯ ಕಿಟಕಿಗಳನ್ನು ಒಡೆದ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಎಐಎಂಐಎಂ ಮುಖ್ಯಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪರಿಚಿತ ಪುಂಡರು ತಮ್ಮ ದೆಹಲಿಯ ಮನೆಗೆ ಕಲ್ಲು ಎಸೆದಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಈ ರೀತಿಯ ದಾಳಿ ನಡೆದಿರುವುದು ಇದು ನಾಲ್ಕನೇ ಬಾರಿ, ನನ್ನ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳಿದ್ದು, ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.