ಬೆಂಗಳೂರು, ಫೆ. 20 (DaijiworldNews/SM): ರಾಜ್ಯದಲ್ಲಿ ನಡೆಯುತ್ತಿರುವ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳ ಕಿತ್ತಾಟ ಇದೀಗ ದೂರಿಗೆ ಪ್ರತಿದೂರು ಎನ್ನುವ ಹಂತಕ್ಕೆ ತಲುಪಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಇಂದು ಬೆಳಗ್ಗೆ ದೂರು ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಭೇಟಿ ಮಾಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ ಅವರೂ ಸಹ ದಾಖಲೆಗಳ ಸಮೇತ ಪ್ರತಿ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ದೂರು ತೆಗೆದುಕೊಂಡಿದ್ದಾರೆ. ಎಲ್ಲಾ ಮಾಹಿತಿ ಅವರಿಗೆ ನೀಡಿದ್ದೇನೆ. ವಿಚಾರಣೆ ಮಾಡಿ ತನಿಖೆ ಕೈಗೊಳ್ಳುತ್ತೇನೆ ಎಂದಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ವಿವರವಾದ ಉಲ್ಲೇಖಗಳೊಂದಿಗೆ ದೂರು ನೀಡಲಾಗಿದ್ದು, ಇಲಾಖೆಗೆ ದಾಖಲೆಗಳನ್ನು ಕೂಡ ರೂಪ ಅವರು ಒದಗಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಇಂದು ಬೆಳಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಅವರನ್ನು ಭೇಟಿಯಾಗಿದ್ದ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು, ಐಪಿಎಸ್ ಅಧಿಕಾರಿ ರೂಪಾ ಅವರು ತನ್ನ ತೇಜೋವಧೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು.