ನವದೆಹಲಿ, ಫೆ 21 (DaijiworldNews/DB): ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ಘೋಷಿಸಲ್ಪಟ್ಟ ಅವಧಿಪೂರ್ವ ಜನಿಸಿದ ನವಜಾತ ಹೆಣ್ಣು ಶಿಶುವೊಂದು ಸ್ಮಶಾನಕ್ಕೆ ಕೊಂಡೊಯ್ದ ವೇಳೆ ಜೀವಂತವಿರುವುದು ಗೊತ್ತಾದ ಘಟನೆ ದೆಹಲಿಯಲ್ಲಿ ನಡೆದಿದೆ.
35 ವರ್ಷ ವಯಸ್ಸಿನ 23 ವಾರಗಳ ಗರ್ಭಿಣಿಗೆ ದೆಹಲಿಯ ಎಲ್ಎನ್ಜೆಪಿ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿಪೂರ್ವವಾಗಿ ಹೆಣ್ಣು ಶಿಶು ಜನಿಸಿತ್ತು. ಶಿಶುವಿನ ತೂಕ ಕೇವಲ 490 ಗ್ರಾಂ ಇತ್ತು. ಮಗು ಹುಟ್ಟಿದ ಬಳಿಕ ಅದು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು. ಹೀಗಾಗಿ ಅದರ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕರೆದೊಯ್ಯಲಾಯಿತು. ಅಂತ್ಯಸಂಸ್ಕಾರಕ್ಕೆ ಸಿದ್ದತೆ ನಡೆಸುತ್ತಿದ್ದಾಗ ಮಗು ಜೀವಂತ ಇರುವುದು ಕಂಡು ಬಂದಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿ ಶಿಶುವನ್ನು ಮೃತ ಎಂದು ಘೋಷಿಸಿ ಪೆಟ್ಟಿಗೆಯಲ್ಲಿ ಹಾಕಿ ನಮಗೆ ಹಸ್ತಾಂತರಿಸಿದ್ದರು. ಆಕೆಯನ್ನು ಮಣ್ಣು ಮಾಡಲೆಂದು ಪೆಟ್ಟಿಗೆ ತೆರೆದಾಗ ಶಿಶು ಕೈಕಾಲು ಆಡಿಸುತ್ತಿರುವುದು ಕಂಡು ಬಂತು. ಕೂಡಲೇ ಮತ್ತೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಆಸ್ಪತ್ರೆಯಲ್ಲಿ ಮತ್ತೆ ಶಿಶುವನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಶಿಶುವಿನ ಮಾವ ಸಲ್ಮಾನ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇನ್ನು ಮಗುವಿನ ತಂದೆ ಮಾತನಾಡಿ, ಭದ್ರತಾ ಸಿಬಂದಿ ಅನುಚಿತ ವರ್ತನೆ ತೋರಿದ್ದಲ್ಲದೆ, ಆಸ್ಪತ್ರೆ ಒಳಗೆ ಹೋಗಲು ಅವಕಾಶವನ್ನೇ ನೀಡಲಿಲ್ಲ. ಬಳಿಕ ಪೊಲೀಸರಿಗೆ ಕರೆ ಮಾಡಿ ಅವರು ಬಂದ ಬಳಿಕವಷ್ಟೇ ದಾಖಲಿಸಿಕೊಳ್ಳಲಾಯಿತು ಎಂದು ದೂರಿದ್ದಾರೆ. ಕುಟುಂಬದಿಂದ ಈ ಸಂಬಂಧ ಯಾವುದೇ ಲಿಖಿತ ದೂರು ಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.