ಹೈದರಾಬಾದ್, ಫೆ 21 (DaijiworldNews/DB): ವರದಕ್ಷಿಣೆಯಾಗಿ ವಧುವಿನ ಮನೆಯವರು ಹಳೆಯ ಪೀಠೋಪಕರಣಗಳನ್ನು ನೀಡಿದ್ದಕ್ಕೆ ವರನೊಬ್ಬ ಮದುವೆಯನ್ನೇ ಮುರಿದುಕೊಂಡ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಭಾನುವಾರ ನಡೆಯಬೇಕಿದ್ದ ಮದುವೆಗೆ ವರ ಹಾಜರಾಗಿಲ್ಲ. ಈ ಕಾರಣಕ್ಕಾಗಿ ವಧುವಿನ ತಂದೆ ಸಹಿತ ಕುಟುಂಬಿಕರು ವರನ ಮನೆಗೆ ಹೋದಾಗ ಆತನ ಪೋಷಕರು ವಧುವಿನ ಮನೆಯವರೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ. ಅಲ್ಲದೆ ಹಳೆಯ ಪೀಠೋಪಕರಣ ನೀಡಲಾಗಿದೆ, ಕೇಳಿದ ವಸ್ತುಗಳನ್ನು ನೀಡಿಲ್ಲ ಎಂಬುದಾಗಿ ತಗಾದೆ ತೆಗೆದಿದ್ದಾರೆ. ಮದುವೆ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಸಂಬಂಧ ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ಮದುವೆ ನಿಂತು ಹೋಗಿರುವ ಕುರಿತು ಬೇಸರ ವ್ಯಕ್ತಪಡಿಸಿರುವ ವಧುವಿನ ತಂದೆ, ಮದುವೆ, ಔತಣಕೂಟಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದೆ. ಆದರೆ ವರನೇ ಮದುವೆಗೆ ಬಂದಿಲ್ಲ. ಇದರಿಂದ ತೀರಾ ಬೇಸರವಾಗಿದೆ ಎಂದಿದ್ದಾರೆ.
ಐಪಿಸಿ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.