ತಿರುವನಂತಪುರ, ಫೆ 21 (DaijiworldNews/MS): ಆಧುನಿಕ ಕೃಷಿ ತಂತ್ರಗಳನ್ನು ಅಧ್ಯಯನ ಮಾಡಲು ಕೇರಳ ಸರ್ಕಾರವು ಇಸ್ರೇಲ್ಗೆ ಕಳುಹಿಸಿದ್ದ 28 ರೈತರಿದ್ದ ತಂಡದ ಪೈಕಿ ಓರ್ವ ರೈತ ನಾಪತ್ತೆಯಾಗಿದ್ದು ಇಸ್ರೇಲ್ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ.
ಹೈಡ್ರೋಪೋನಿಕ್ಸ್ ಮತ್ತು ನಿಖರ ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಕೇರಳ ಸರ್ಕಾರ ಈ ತಂಡವನ್ನು ಕಳುಹಿಸಿತ್ತು. ಈ ಪೈಕಿ ಕಣ್ಣೂರು ಜಿಲ್ಲೆಯ ಇರಿಟ್ಟಿ ಮೂಲದ 48 ವರ್ಷದ ರೈತ ಜಾರ್ಜ್ ಕುರಿಯನ್ ಇಸ್ರೇಲ್ ಹಜ್ಲೀಯಾ ನಗರದಲ್ಲಿ ಉಳಿದುಕೊಂಡಿದ್ದ ಹೊಟೇಲ್ ನಿಂದ ನಾಪತ್ತೆಯಗಿದ್ದಾರೆ.
ಫೆ.17ರಂದು ಊಟ ಮಾಡಲು ತಂಡ ಹೊರಟಾಗ ಕುರಿಯನ್ ಬಂದಿರಲಿಲ್ಲ. ಹಲವೆಡೆ ಹುಡುಕಾಡಿದ ಬಳಿಕವೂ ಅವರ ಪತ್ತೆಯಾಗದ ಹಿನ್ನಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ.
ಇಸ್ರೇಲ್ನ ಕಾನೂನು ಜಾರಿ ಸಂಸ್ಥೆ ಅವರನ್ನು ಪತ್ತೆಹಚ್ಚಲು ಪ್ರಯತ್ನಿಸಿದರೂ ಅವರು ಎಲ್ಲಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಕುರಿಯನ್ ವಿರುದ್ಧ ದೂರು ದಾಖಲು ಮಾಡಿದ್ದು, ಅವರು ಸಿಕ್ಕಿದ ನಂತರ ಗಡಿಪಾರು ಮಾಡಲಾಗುವುದು ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ. ಮೇ 8 ರಂದು ಕುರಿಯನ್ ವೀಸಾ ಅವಧಿ ಮುಕ್ತಾಯಗೊಳ್ಳಲಿದೆ
ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ. ಅಶೋಕ್ ನೇತೃತ್ವದ ನಿಯೋಗ ಇದೇ 11ರಂದು ಇಸ್ರೇಲ್ಗೆ ತೆರಳಿತ್ತು. ಕುರಿಯನ್ ಬಿಟ್ಟು ಉಳಿದವರ ತಂಡ ಭಾನುವಾರ ಇಸ್ರೇಲ್ನಿಂದ ನಿರ್ಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.