ನವದೆಹಲಿ, ಫೆ 21 (DaijiworldNews/DB): ಸಂಸತ್ ಭವನದಲ್ಲಿರುವ ಶಿವಸೇನೆ ಕಚೇರಿಯನ್ನು ಲೋಕಸಭೆಯ ಸೆಕ್ರೆಟರಿಯೇಟ್ ಮಂಗಳವಾರ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಹಂಚಿಕೆ ಮಾಡಿದೆ. ಆ ಮೂಲಕ ಕೆಲ ದಿನಗಳ ಹಿಂದೆ ಪಕ್ಷದ ಚಿಹ್ನೆ ಮತ್ತು ಹೆಸರು ಕಳೆದುಕೊಂಡಿದ್ದ ಉದ್ದವ್ ಠಾಕ್ರೆ ಬಣಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.
ಶಿಂಧೆ ಬಣದ ಫ್ಲೋರ್ ಲೀಡರ್ ರಾಹುಲ್ ಶೆವಾಲೆ ಬರೆದ ಪತ್ರಕ್ಕೆ ಲೋಕಸಭೆಯ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದು, ಪಕ್ಷಕ್ಕೆ ಕೊಠಡಿ ಹಂಚಿಕೆ ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಶಿವಸೇನೆಯ ಮೂಲ ಚಿಹ್ನೆ ಬಿಲ್ಲು ಬಾಣ ಹಾಗೂ ಹೆಸರನ್ನು ಶಿಂಧೆ ಬಣಕ್ಕೆ ನೀಡಿ ಕೇಂದ್ರ ಚುನಾವಣಾ ಆಯೋಗ ಆದೇಶಿಸಿತ್ತು. ಈ ಆದೇಶವನ್ನು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಜರೆದಿರುವ ಉದ್ದವ್ ಠಾಕ್ರೆ, ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಈ ಅರ್ಜಿಯ ವಿಚಾರಣೆ ಸುಪ್ರೀಂನಲ್ಲಿ ನಾಳೆ ನಡೆಯುತ್ತಿದೆ. ಈ ನಡುವೆ ಠಾಕ್ರೆ ಬಣಕ್ಕೆ ಮತ್ತೆ ಆಘಾತ ಎದುರಾಗಿದೆ.