ಬೆಂಗಳೂರು, ಫೆ 21 (DaijiworldNews/HR): ಕೈಲಾಗದವರು ಮೈ ಪರಚಿಕೊಂಡರು ಎನ್ನುವ ಮಾತನ್ನು ಕಾಂಗ್ರೆಸ್ ಪದೇ ಪದೆ ಸಾಬೀತು ಪಡಿಸಲು ಹೊರಟಿದೆ. ಬಡ ಕುಟುಂಬದಲ್ಲಿ ಹುಟ್ಟಿ ಚಾಯ್ ವಾಲಾ ಆಗಿ ದೇಶದ ಚುಕ್ಕಾಣಿ ಹಿಡಿದು ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಬೆಳಗಿಸುತ್ತಿರುವ ಮೋದಿಯವರನ್ನು ಚುನಾವಣೆಯಲ್ಲಿ ಎದುರಿಸಲಾಗದ ಹೇಡಿಗಳು ತೇಜೋವಧೆಗೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಬಡ ಕುಟುಂಬದಲ್ಲಿ ಹುಟ್ಟಿ ಚಾಯ್ ವಾಲಾ ಆಗಿ ದೇಶದ ಚುಕ್ಕಾಣಿ ಹಿಡಿದು ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಬೆಳಗಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಚುನಾವಣೆಯಲ್ಲಿ ಎದುರಿಸಲಾಗದ ಹೇಡಿಗಳು ತೇಜೋವಧೆಗೆ ಇಳಿದಿದ್ದಾರೆ' ಎಂದಿದೆ.
'ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆದಾಗಲೇ ಮುಂದೊಂದು ದಿನ ದೇಶದ ಚುಕ್ಕಾಣಿ ಹಿಡಿಯುವ ಸೂಚನೆ ಕಾಂಗ್ರೆಸ್ಗೆ ಸಿಕ್ಕಿತ್ತು. ಆಗಲೇ ಮೋದಿಯವರನ್ನು ಮಟ್ಟ ಹಾಕಲು ವಿರೋಧಿಗಳು ಷಡ್ಯಂತ್ರ ಹೆಣೆದಿದ್ದರು. 'ಸಾವಿನ ವ್ಯಾಪಾರಿ' ಎಂದು ಸೋನಿಯಾ ಗಾಂಧಿ ಈ ಸಂಸ್ಕೃತಿಗೆ ಅಂದೇ ನಾಂದಿ ಹಾಡಿದ್ದರು ಎಂದು ಬಿಜೆಪಿ ಗುಡುಗಿದೆ.
'ಬ್ರಿಟಿಷರಿಂದ ನೇರವಾಗಿ ಅಧಿಕಾರ ಹಿಡಿದ ಕಾಂಗ್ರೆಸ್ ತನ್ನ ಪರಕೀಯ ಮೂಲವನ್ನು ಇಂದಿಗೂ ಉಳಿಸಿಕೊಂಡಿದೆ. ಸುದೀರ್ಘ ಅಧಿಕಾರ ಹಿಡಿಯಲು ಮತ್ತು ಜನರನ್ನು ವಂಚಿಸಲು ಇಂದಿನ ನಕಲಿ ಗಾಂಧಿ ಕುಟುಂಬ ಬಳಸಿಕೊಂಡಿದ್ದು ಮಹಾತ್ಮ ಗಾಂಧಿಯ ಹೆಸರನ್ನು. ಕಾಂಗ್ರೆಸ್ ವಿಸರ್ಜಿಸಿ ಎಂದ ಮಹಾತ್ಮರ ಹೆಸರು ಇಟ್ಟುಕೊಂಡು ಕೈ ಪಕ್ಷ ದೇಶಕ್ಕೆ ದ್ರೋಹ ಬಗೆದಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು 'ಗಾಂಧಿ ಹೆಸರು ಇಟ್ಟುಕೊಂಡ ನಿಯೋ ಗಾಂಧಿಗಳ 'ಘಂಡಿ' ಇತಿಹಾಸವೇ ರೋಚಕ. ಇಂದಿರಾ ಪ್ರಿಯದರ್ಶಿನಿ ನೆಹರು ಇಂದಿರಾ ಗಾಂಧಿಯಾದರು. ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ ಸೋನಿಯಾ ಗಾಂಧಿಯಾದರು. ಪ್ರಿಯಾಂಕಾ ವಾದ್ರಾ ಆಗಬೇಕಿದ್ದ ಪ್ರಿಯಾಂಕಾ ಗಾಂಧಿ ಆಗಿಯೇ ಉಳಿದರು. ನಕಲಿ ಗಾಂಧಿಗಳು ಹೆಸರು ಬದಲಾಯಿಸಿದರು. ದೇಶದ ಜನ ಇವರನ್ನೇ ಬದಲಾಯಿಸಿದರು' ಎಂದು ಬಿಜೆಪಿ ವ್ಯಂಗ್ಯವಾಡಿದೆ.