ನವದೆಹಲಿ, ಫೆ 22 (DaijiworldNews/MS): ಕರ್ನಾಟಕದ ಪಿಯು ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ಹಿಜಾಬ್ ಧರಿಸಿ ಬರೆಯಲು ಅನುಮತಿ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪರಿಶೀಲಿಸಲು ಸುಪ್ರೀಂಕೋಟ್ನ ಸಿಜೆಐ ಡಿ ವೈ ಚಂದ್ರಚೂಡ್ ಮತ್ತು ನ್ಯಾ. ಪಿ.ಎಸ್ ನರಸಿಂಹ ಪೀಠವು ಬುಧವಾರ ತನ್ನ ಒಪ್ಪಿಗೆಯನ್ನು ಸೂಚಿಸಿದೆ.
ಹಿಜಾಬ್ ಧರಿಸಿ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ಕೋರಿ ಕರ್ನಾಟಕದ ವಿದ್ಯಾರ್ಥಿನಿಯರ ಗುಂಪು ಬುಧವಾರ ತಮ್ಮ ಅರ್ಜಿಯ ತುರ್ತು ವಿಚಾರಣೆಗಾಗಿ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದು ಅರ್ಜಿ ವಿಚಾರಣೆಯನ್ನು ಪರಿಶೀಲಿಸವ ಭರವಸೆಯನ್ನು ಪೀಠ ನೀಡಿದೆ.
ಮಾರ್ಚ್ 9 ರಂದು ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡದಿದ್ದರೆ ವಿದ್ಯಾರ್ಥಿನಿಯರು ಮತ್ತೆ ಒಂದು ವರ್ಷ ಕಳೆದುಕೊಳ್ಳುತ್ತಾರೆ ಎಂದು ವಿದ್ಯಾರ್ಥಿನಿಯರ ಪರ ವಕೀಲ ಶಾದನ್ ಫರಾಸತ್ ತುರ್ತು ವಿಚಾರಣೆಗೆ ಕೋರಿದ್ದರು.
"ಪರೀಕ್ಷೆ ತೆಗೆದುಕೊಳ್ಳದಂತೆ ಅವರನ್ನು ತಡೆಯುವವರು ಯಾರು" ಎಂದು ಸಿಜೆಐ ಕೇಳಿದಾಗ, ವಕೀಲರು, "ಖಾಸಗಿ ಕಾಲೇಜುಗಳ ಹೆಣ್ಣುಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆ ಬರೆಯಬೇಕಾಗಿದ್ದು, ತಮ್ಮ ತಲೆಗೆ ಸ್ಕಾರ್ಫ್ ಹಾಕಿಕೊಂಡು ಪರೀಕ್ಷೆಗೆ ಹೋಗಲು ಸರ್ಕಾರ ಅನುಮತಿಸುವುದಿಲ್ಲ ಮತ್ತು ವಿದ್ಯಾರ್ಥಿನಿಯರು ಅದಿಲ್ಲದೇ ಪರೀಕ್ಷೆಯನ್ನು ಬರೆಯಲು ಸಿದ್ಧರಿಲ್ಲ" ಎಂದು ಮಾಹಿತಿ ನೀಡಿದರು. ಬಳಿಕ ಅರ್ಜಿ ವಿಚಾರಣೆಯನ್ನು ಪರಿಶೀಲಿಸಲು ಒಪ್ಪಿಗೆ ನೀಡಿತು.