ಮುಂಬೈ, ಫೆ 22 (DaijiworldNews/DB): ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ನನ್ನ ಹಾಗೂ ನನ್ನ ಮಗನ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂದು ಶಿವಸೇನಎ (ಉದ್ದವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಗಂಭೀರ ಆರೋಪ ಮಾಡಿದ್ದಾರೆ.
ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ರಾವುತ್, ಏಕನಾಥ ಶಿಂಧೆ ಅವರು ತಮ್ಮ ಪುತ್ರ ಶ್ರೀಕಾಂತ್ ಶಿಂಧೆ ಮುಖಾಂತರ ನನ್ನ ಹಾಗೂ ನನ್ನ ಮಗನ ಹತ್ಯೆಗೆ ಸುಪಾರಿ ನೀಡಿದ್ದಾರೆ. ನನ್ನ ಮಗನನ್ನು ಕೊಲೆಗೈಯಲು ಥಾಣೆಯಲ್ಲಿ ರೌಡಿಗಳನ್ನು ಸಹ ನೇಮಿಸಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಜನಪ್ರತಿನಿಧಿಗಳ ಮೇಲೆ ಹಲ್ಲೆ ಪ್ರಕರಣಗಳು ಆಗಾಗ ಘಟಿಸುತ್ತಲೇ ಇವೆ. ಇಂತಹ ಘಟನೆಗಳು ಅಪಾಯಕಾರಿಯಾಗಿದ್ದು, ಇದಕ್ಕೆಲ್ಲಾ ಅಗತ್ಯವಾಗಿ ಕಡಿವಾಣ ಹಾಕಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ರಾವುತ್ ಪತ್ರಕ್ಕೆ ಪ್ರತಿಕ್ರಿಯಿಸಿರುವ ಫಡ್ನವೀಸ್, ರಾವುತ್ ಪತ್ರ ಬರೆದಿರುವುದು ಯಾಕೆಂದು ನನಗೆ ತಿಳಿಯದು. ಸುಳ್ಳಿನ ಮೂಲಕ ಸಹಾನುಭೂತಿ ಗಿಟ್ಟಿಸುವ ಯತ್ನ ನಡೆಯದು. ಆಧಾರರಹಿತ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ತಮಗೆ ಜೀವ ಬೆದರಿಕೆ ಇದೆ ಎಂಬುದಾಗಿ ಕಾಂಗ್ರೆಸ್ ಶಾಸಕ ಅಶೋಕ್ ಚವ್ಹಾಣ್ ಅವರೂ ನಾಂದೇಡ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.