ಬೆಂಗಳೂರು, ಫೆ 22 (DaijiworldNews/SM): ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರು ಭಟ್ಕಳದಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿದ್ದಾರೆ ಎನ್ನುವ ಆರೋಪಕ್ಕೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಬಿಜೆಪಿಯವರಿಗೆ ಸ್ಪಷ್ಟವಾದ ವಿಚಾರಧಾರೆಗಳೇ ಇಲ್ಲ. ಇವೆಲ್ಲವು ಚರ್ಚೆ ಮಾಡುವ ವಿಚಾರಗಳಲ್ಲ. ರಾಜ್ಯದ ಅಭಿವೃದ್ಧಿ ವಿಚಾರವಾಗಿ ಚರ್ಚೆಯನ್ನು ನಡೆಸಬೇಕು. ಆದರೆ, ಅದಕ್ಕೆ ಅವರು ಸಿದ್ಧವಿಲ್ಲ. ಮಾಂಸ ತಿಂದು ಅಥವಾ ತಿನ್ನದೇ ದೇವಸ್ಥಾನಕ್ಕೆ ತೆರಳುವುದು ಚರ್ಚೆಯ ವಿಚಾರವಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಯವರ ನಾಟಕವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಇವರ ಎಲ್ಲಾ ನಾಟಕವನ್ನು ಜನರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಇವರಿಗೆ ಉತ್ತರ ನೀಡುತ್ತಾರೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.