ನವದೆಹಲಿ, ಫೆ 21 (DaijiworldNews/DB): ದೇಶಾದ್ಯಂತ ಇತ್ತೀಚೆಗೆ ಎನ್ ಐಎ ನಡೆಸಿದ ದಾಳಿಯಲ್ಲಿ 8 ರಾಜ್ಯಗಳ 76 ಸ್ಥಳಗಳಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಿದೆ. ಬಂಧಿತರ ಪೈಕಿ ಕೆಲವರು ಖಲಿಸ್ತಾನ್ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದವರೂ ಸೇರಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಎನ್ ಸಿಆರ್, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಎನ್ ಐಎ ದಾಳಿ ನಡೆಸಿತ್ತು. ಈ ವೇಳೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಗ್ಯಾಂಗ್ ಸ್ಟರ್ ಗಳಾದ ಲಾರೆನ್ಸ್ ಬಿಷ್ಣೋಯ್, ಜಗ್ಗು ಭಗವಾನ್ ಪುರಿಯಾ ಮತ್ತು ಗೋಲ್ಡಿ ಬ್ರಾರ್ ಅವರ ನಿಕಟ ಸಹಚರರೂ ಇದ್ದಾರೆ ಎಂದು ಎನ್ ಐಎ ತಿಳಿಸಿದೆ. ಇನ್ನು ಕೆನಡಾ ಮೂಲದ ಭಯೋತ್ಪಾದಕ ಅರ್ಶ್ ದಲ್ಲಾನ ನಿಕಟ ಸಹಚರ ಲಕ್ಕಿ ಖೋಕರ್ ಅಲಿಯಾಸ್ ಡೆನಿಸ್ ಎಂಬಾತನೂ ಬಂಧಿಸಲ್ಪಟ್ಟಿದ್ದಾನೆ. ಈತ ಭಯೋತ್ಪಾದನೆ ಸಂಘಟನೆಗಳಿಗೆ ನೇಮಕಾತಿ ಮಾಡುತ್ತಿದ್ದ. ಅಲ್ಲದೆ ದಲ್ಲಾನಿಂದ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ಪಡೆಯುತ್ತಿದ್ದ ಎಂದೂ ತಿಳಿದು ಬಂದಿದೆ.
ಇನ್ನು ಹಲವು ಅಪರಾಧಿಗಳು ಭಾರತದಲ್ಲಿ ದರೋಡೆಕೋರರಾಗಿದ್ದಲ್ಲದೆ ವಿವಿಧ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಜೈಲಿನಲ್ಲಿರುವವರೊಂದಿಗೆ ಸೇರಿಕೊಂಡು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದರು ಎಂದೂ ತಿಳಿದು ಬಂದಿದೆ.