ಪಾಟ್ನಾ, ಫೆ 23 (DaijiworldNews/DB): ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೇಮ್ ಚೇಂಜರ್ ಆಗಿರಬಹುದು ಎಂದು ಟಿಎಂಸಿ ನಾಯಕ ಹಾಗೂ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಶಕ್ತಿಶಾಲಿ ಮತ್ತು ಸಮರ್ಥ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದ ಎಲ್ಲಾ ಪ್ರತಿಪಕ್ಷಗಳು ಒಗ್ಗಟ್ಟಿಗಾಗಿ ಒತ್ತಾಯಿಸುತ್ತಿವೆ. ವಿರೋಧಪಕ್ಷಗಳೆಲ್ಲಾ ಒಗ್ಗೂಡಿ ಚುನಾವಣೆ ಎದುರಿಸುತ್ತವೆ. ಆದರೆ ಮಮತಾ ಬ್ಯಾನರ್ಜಿಯವರು ಖಂಡಿತವಾಗಿಯೂ ಗೇಮ್ ಚೇಂಜರ್ ಆಗಲಿದ್ದಾರೆ ಎಂದರು.
ನರೇಂದ್ರ ಮೋದಿ ಮತ್ತು ಬಿಜೆಪಿಗೆ ಕೆಟ್ಟ ದಿನಗಳು ಎದುರಾಗುವುದು ನಿಶ್ಚಿತ. ಅವರು ಜನತೆಗೆ ಭರವಸೆಗಳನ್ನು ನೀಡಿದ್ದಾರೆಯೇ ಹೊರತು ಅದನ್ನು ಈಡೇರಿಸುವಲ್ಲಿ ಯಾವುದೇ ಆಸಕ್ತಿ ತೋರಿಸಿಲ್ಲ. ವಿಪಕ್ಷಗಳೆಲ್ಲಾ ಇಚ್ಚಾಶಕ್ತಿಯಿಂದ ಕಾರ್ಯರೂಪಕ್ಕಿಳಿದರೆ ಬಿಜೆಪಿಗೆ 100ಕ್ಕಿಂತ ಕಡಿಮೆ ಸ್ಥಾನ ಸಿಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದವರು ತಿಳಿಸಿದರು.
ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬಹುದಾದರೆ ತೇಜಸ್ವಿ ಯಾದವ್ ಬಿಹಾರ ಸಿಎಂ ಆಗಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿರುವುದಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಎಪಿಯಿಂದಲೇ ಮೇಯರ್ ಆಯ್ಕೆಯಾಗುವುದು ನನಗೆ ತಿಳಿದಿತ್ತು ಎಂದು ಪ್ರತಿಪಾದಿಸಿದರು.