ಮುಂಬೈ, ಫೆ 23 (DaijiworldNews/DB): 16 ತಿಂಗಳ ಮಗುವಿನ ಚಿಕಿತ್ಸೆಗಾಗಿ ಕೇರಳದ ದಂಪತಿಯೊಬ್ಬರಿಗೆ ಅನಾಮಧೇಯ ದಾನಿಯೊಬ್ಬರು 15.31 ಕೋಟಿ ರೂ. ನೆರವು ನೀಡಿದ ಪ್ರಸಂಗ ನಡೆದಿದೆ.
ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಕಾಯಿಲೆಯಿಂದ ಬಳಲುತ್ತಿರುವ ಪುತ್ರ ನಿರ್ವಾಣ್ನ ಚಿಕಿತ್ಸೆಗಾಗಿ ಕೇರಳದ ಮೆರೈನ್ ಇಂಜಿನಿಯರ್ ಸಾರಂಗ್ ಮೆನನ್ ಮತ್ತು ಅದಿತಿ ನಾಯರ್ ದಂಪತಿ ದೇಣಿಗೆ ಸಂಗ್ರಹಿಸುತ್ತಿದ್ದರು. ಇದೊಂದು ಅಪರೂಪದ ಮೆದುಳಿನ ಕಾಯಿಲೆಯಾಗಿದ್ದು, ಚಿಕಿತ್ಸೆಗೆ ಪ್ರಮುಖವಾಗಿ ಬೇಕಾಗಿದ್ದ ಔಷಧಕ್ಕೆ 17.3 ಕೋಟಿ ರೂ. ಬೇಕಾಗಿದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿರುವ ಕ್ರೌಡ್ ಫಂಡಿಂಗ್ ವೇದಿಕೆ ಮಿಲಾಪ್ನಲ್ಲಿ ದಂಪತಿ ನೆರವು ಯಾಚಿಸಿದ್ದರು. ಅವರ ಮನವಿಗೆ ಸ್ಪಂದಿಸಿ ಹಲವಾರು ಮಂದಿ ನೆರವು ನೀಡಿದ್ದಾರೆ. ಆದರೆ ಇದೇ ವೇಳೆ ಅನಾಮಧೇಯ ವ್ಯಕ್ತಿಯೊಬ್ಬ 1.4 ಶತಕೋಟಿ ಡಾಲರ್ ನೀಡಿದ್ದಾರೆ. ಆದರೆ ಈ ವ್ಯಕ್ತಿ ಯಾರೆಂಬುದು ತಿಳಿದಿಲ್ಲ ಎಂದು ಅದಿತಿ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬರು ಇಷ್ಟು ದೊಡ್ಡ ಮೊತ್ತದಲ್ಲಿ ಹಣ ನೀಡಿರುವುದರಿಂದ ಉಳಿದ ಹಣಕ್ಕಾಗಿ ನಾವು ಸಂಬಂಧಿಕರು, ಸ್ನೇಹಿತರನ್ನು ಕೇಳಿಕೊಂಡಿದ್ದೇವೆ. ಕಡ್ಡಾಯವಾಗಿರುವ ಕೆಲವು ಪರೀಕ್ಷೆಗಳು ಮತ್ತು ಅಮೆರಿಕಾದಿಂದ ಮುಂಬೈಗೆ ಔಷಧ ಬರಲು ಕನಿಷ್ಠ ಎರಡ್ಮೂರು ವಾರಗಳು ಬೇಕು. ಈಗಾಗಲೇ ಔಷಧ ಆಮದಿಗಾಗಿ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆಮದು-ರಫ್ತು ಇಲಾಖೆಗೆ ಸಂಪರ್ಕ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದೂಜಾ ಆಸ್ಪತ್ರೆಯ ಮಕ್ಕಳ ನರರೋಗ ತಜ್ಞ ಡಾ. ನೀಲು ದೇಸಾಯಿ ಅವರು ನಿರ್ವಾಣ್ಗೆ ಚಿಕಿತ್ಸೆ ನೀಡಲಿದ್ದಾರೆ.