ಬೆಂಗಳೂರು, ಫೆ 23 (DaijiworldNews/MS): ಸರ್ಕಾರ ಹುದ್ದೆಯನ್ನು ತೋರಿಸದೆ ವರ್ಗಾವಣೆ ಮಾಡಿದರೂ ಐಎಎಸ್ - ಐಪಿಎಸ್ ಅಧಿಕಾರಿಗಳಾದ ಡಿ ರೂಪಾ ಮತ್ತು ರೋಹಿಣಿ ಸಿಂಧೂರಿ ಜಟಾಪಟಿ ನಿಲ್ಲುವಂತೆ ಕಾಣುತ್ತಿಲ್ಲ.
ರೋಹಿಣಿ ಸಿಂಧೂರಿ ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ಕಾನೂನು ಸಮರಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. 2 ದಿನಗಳ ಹಿಂದೆ ಬೆಂಗಳೂರಿನ ಬಾಗಲಗುಂಟೆಯ ಪೊಲೀಸ್ ಠಾಣೆಯಲ್ಲಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ರೂಪಾ ವಿರುದ್ಧ ದೂರು ನೀಡಿದ್ದರು. ಆದರೆ ಆಗ ಎಫ್ಐಆರ್ ದಾಖಲಾಗಿರಲಿಲ್ಲ.
ಈ ನಡುವೆ ರೂಪಾ ವಿರುದ್ದ ರೋಹಿಣಿ ತಡೆಯಾಜ್ಞೆ ನೀಡುವಂತೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮಧ್ಯಂತರ ಆದೇಶವನ್ನು ಇಂದಿಗೆ ಕಾಯ್ದಿರಿಸಿದೆ.
ರೋಹಿಣಿ ಸಿಂಧೂರಿ ಪರ ವಕೀಲರು ರೂಪಾ ಅವರಿಗೆ ಲೀಗಲ್ ನೊಟೀಸ್ ಕಳುಹಿಸಿದ್ದಾರೆ. ಅಲ್ಲದೆ ನೊಟೀಸ್ ನಲ್ಲಿ ರೋಹಿಣಿ ಸಿಂಧೂರಿಯವರ ಮಾನಹಾನಿ ಮಾಡುವ ಫೋಟೋಗಳು, ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾಗಳಿಂದ ತೆಗೆಯುವಂತ ರೂಪಾ ಅವರಿಗೆ ಸೂಚಿಸಿದ್ದು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಹಾಗೂ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.