ಬೆಂಗಳೂರು, ಫೆ 23 (DaijiworldNews/DB): ಮಾಂಸಾಹಾರ ಸೇವನೆ ಮಾಡಿರುವುದು ನಿಜ. ಆದರೆ ದೇವಸ್ಥಾನದ ಗರ್ಭ ಗುಡಿಗೆ ಹೋಗಿಲ್ಲ. ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯದವರು ದೇವಸ್ಥಾನದ ಆವರಣದಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಸ್ಥಳೀಯರು ವೀಕ್ಷಣೆಗೆಂದು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು ಎಂದರು.
ಕೆಲವು ದೇವಸ್ಥಾನಗಳಲ್ಲಿ ಮಾಂಸಾಹಾರಿ ನೈವೇದ್ಯ ನೀಡಲಾಗುತ್ತದೆ. ಕೆಲವೆಡೆ ಮಾಂಸಾಹಾರ ನಿಷಿದ್ದವಾಗಿರುತ್ತದೆ. ನಾನು ಮಾಂಸಾಹಾರ ಸೇವನೆ ಮಾಡಿರುವುದನ್ನೇ ಮರೆತಿದ್ದೆ. ಆದರೆ ಗರ್ಭಗುಡಿಗೆ ಹೋಗಿಲ್ಲ. ಪ್ಯಾಸೇಜ್ ಸ್ಥಳಕ್ಕೆ ಹೋಗಿ ಬಂದಿದ್ದೆ ಎಂದರು.
ಇನ್ನು ಈ ವಿವಾದ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ. ರವಿ ದೇವಸ್ಥಾನದ ಹೊರಗೆ ನಿಂತಿದ್ದಾರೆಯೇ ಹೊರತು ಒಳಗೆ ಹೋಗಿಲ್ಲ. ಹೊರಗೆ ನಿಂತು ದೇವರಿಗೆ ಕೈ ಮುಗಿದಿದ್ದೇನೆಂದು ಅವರೇ ಹೇಳಿದ್ದಾರೆ ಎಂದು ತಿಳಿಸಿದರು.
ದೇವಸ್ಥಾನಕ್ಕೆ ಮಾಂಸ ಸೇವಿಸಿ ಭೇಟಿ ವಿಚಾರವೆಲ್ಲ ವೈಯಕ್ತಿಕ ಆಯ್ಕೆಗಳು. ರಾಜಕೀಯ ಚರ್ಚೆಗೆ ಇವೆಲ್ಲ ವಸ್ತುವಾಗಬಾರದು. ಜನರ, ರಾಜ್ಯದ ಅಭಿವೃದ್ದಿ ವಿಚಾರವಾಗಿಯಷ್ಟೇ ನಾಯಕರು ಚರ್ಚಿಸಬೇಕು. ಪರರ ಟೀಕೆ ಮಾಡುವ ಸಿ.ಟಿ. ರವಿಗೆ ದೇವರು ಸದ್ಬುದ್ದಿ ಕೊಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.
ಈ ಹಿಂದೆ ನಾನು ಮೀನೂಟ ಸೇವಿಸಿ ದೇವಳಕ್ಕೆ ಹೋಗಿದ್ದೆ ಎಂದು ಬಿಜೆಪಿಗರು ಅಪಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಎಂದಿದ್ದರು. ಹೀಗಿರುವಾಗ ತಾನು ಮಾಂಸಾಹಾರ ಸೇವಿಸಿದ್ದು ನಿಜ, ಆದರೆ ದೇವಳದ ಒಳ ಪ್ರವೇಶಿಸಿಲ್ಲ, ರಸ್ತೆಯಲ್ಲಿಯೇ ನಿಂತು ಕೈ ಮುಗಿದಿದ್ದೆ ಎಂಬ ಸಿ.ಟಿ. ರವಿ ವಾದ ಹಸಿ ಸುಳ್ಳು. ಈ ರೀತಿಯ ಸುಳ್ಳು ಹೇಳುವುದು ಅವರ ಹುಟ್ಟು ಗುಣ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಹೀಗೆ ಅಪಪ್ರಚಾರ ಮಾಡಿದವರೆಲ್ಲರೂ ಈಗ ಸಿ.ಟಿ.ರವಿ ಕೃತ್ಯದಿಂದ ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ. ನಾಯಕರ ಸುಳ್ಳು ಸುದ್ದಿಯನ್ನು ನಂಬಿ ನನ್ನನ್ನು ಟೀಕಿಸಿದ್ದ. ರಾಜ್ಯದ ಕೆಲವು ಮಠಾಧೀಶರು ಈ ಬಗ್ಗೆ ಮೌನವಾಗಿದ್ದಾರೆ. ಇದು ನನಗೆ ಅಚ್ಚರಿ ಉಂಟುಮಾಡಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.