ಬೆಂಗಳೂರು, ಫೆ 23 (DaijiworldNews/DB): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ. ದೈಹಿಕವಾಗಿ ಶಕ್ತರಿರುವ ಅವರು ಶಿಕಾರಿಪುರದಿಂದ ಸ್ಪರ್ಧಿಸಬೇಕು. ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಸಂಬಂಧ ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ಯಡಿಯೂರಪ್ಪನವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದಲೇ ಸ್ಪರ್ಧಿಸುವ ನಿರ್ಧಾರ ಕೈಗೊಂಡರೆ ಅದನ್ನು ಸಂತೋಷದಿಂದ ಸ್ವಾಗತಿಸುತ್ತೇನೆ. ನನ್ನ ಸಲಹೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆಂದು ಭಾವಿಸಿದ್ದೇನೆ ಎಂದಿದ್ದಾರೆ.
ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿರುವ ಯಡಿಯೂರಪ್ಪನವರು ಮತ್ತೊಮ್ಮೆ ಶಾಸಕರಾಗಿ ಜನಸೇವೆ ಮಾಡಲು ದೈಹಿಕವಾಗಿ ಶಕ್ತರಿದ್ದಾರೆ. ಹೀಗಿದ್ದಾಗ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದರೆ ದಶಕಗಳಿಂದ ಗೆಲ್ಲಿಸುತ್ತಾ ಬಂದಿರುವ ಶಿಕಾರಿಪುರದ ಜನರಿಗೆ ದ್ರೋಹ ಬಗೆದಂತಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಬಿಎಸ್ವೈ ಅವರು ನನ್ನ ಮೇಲಿನ ಪ್ರೀತಿಯಿಂದ ಮುಂದಿನ ಚುನಾವಣೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದ್ದಾರೆ. ಅವರ ಸಲಹೆಗೆ ಧನ್ಯವಾದ. ನನ್ನ ಹಿತೈಷಿಯಂತಿರುವ ಯಡಿಯೂರಪ್ಪನವರಿಗೆ ದೇವರು ದೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಇದೇ ವೇಳೆ ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ.
ಕಳೆದ 5 ವರ್ಷಗಳಿಂದ ಬಾದಾಮಿಯ ಶಾಸಕನಾಗಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದ ಜನರ ಕಷ್ಟ ಸುಖಕ್ಕೆ ನೀಡಿದ ಸ್ಪಂದನೆಯೇ ಅಲ್ಲಿ ನನ್ನನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಲಿದೆ ಎಂಬ ಪೂರ್ಣ ಭರವಸೆ ನನಗಿದೆ. ಸೋಲುವ ಭಯದಿಂದ ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂಬುದು ಕೆಲವರ ಭ್ರಮೆ ಅಷ್ಟೆ. ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಿ ಶಾಸಕನಾದರೆ ವಾರಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಭೇಟಿ ಕೊಟ್ಟು, ಜನರ ಕಷ್ಟದಲ್ಲಿ ಭಾಗಿಯಾಗಬೇಕು, ಅಭಿವೃದ್ಧಿ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳಬೇಕು. ಆದರೆ ವಯಸ್ಸು 75 ದಾಟಿದೆ, ದೂರದ ಪ್ರಯಾಣ ಕಷ್ಟವೆನಿಸಿ ಬೆಂಗಳೂರಿಗೆ ಸಮೀಪದ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದವರು ಹೇಳಿದ್ದಾರೆ.
ಕಳೆದ 5 ವರ್ಷದಿಂದ ಬಾದಾಮಿ ಕ್ಷೇತ್ರ ಹಿಂದೆಂದೂ ಕಾಣದ ಅಭಿವೃದ್ಧಿ ಕಾರ್ಯಗಳನ್ನು ಕಂಡಿದೆ. ನನಗೆ ಮತ ನೀಡಿ ಗೆಲ್ಲಿಸಿದ ಬಾದಾಮಿ ಜನರ ನಂಬಿಕೆಗೆ ಈ 5 ವರ್ಷಗಳಲ್ಲಿ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂಬ ಸಂತೃಪ್ತಿ ನನಗಿದೆ. ಬಾದಾಮಿಯ ಜನರ ಪ್ರೀತಿಗೆ ನಾನು ಸದಾ ಋಣಿ ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.