ಬಳ್ಳಾರಿ, ಫೆ 23 (DaijiworldNews/MS): ರಾಜ್ಯದಲ್ಲಿ ಕಾಂಗ್ರೆಸ್ಗೆ ಮತ್ತೆ ಅಧಿಕಾರ ಕೊಟ್ಟರೆ ದೆಹಲಿಯ ಕಾಂಗ್ರೆಸ್ಗೆ ಎಟಿಎಂ ಸಿಕ್ಕ ಹಾಗೆ ಆಗುತ್ತದೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕಳೆದ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದರೂ ಪೂರ್ಣ ಬಹುಮತ ಸಿಗಲಿಲ್ಲ. ಬಳಿಕ ಕಾಂಗ್ರೆಸ್ - ಜೆಡಿಎಸ್ ಅಧಿಕಾರಕ್ಕೆ ಬಂದು ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ನಡೆಸಿದವು. ಹೀಗಾಗಿ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿಯೊಂದೇ ಉತ್ತರ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಇಂದು ವಿಜಯ ಸಂಕಲ್ಪ ಸಮಾವೇಶದ ಅಂಗವಾಗಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಆಯ್ಕೆಗೆ ಮೊದಲೇ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ- ಶಿವಕುಮಾರ್ ನಡುವೆ ಕಿತ್ತಾಟ ನಡೆದಿದೆ ಎಂಬುದನ್ನು ಮತದಾರರು ನೆನಪಿನಲ್ಲಿ ಇಡಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಕಾಂಗ್ರೆಸ್ನದು ತುಕಡೆ ತುಕಡೆ ಪಕ್ಷವಾಗಿದ್ದು ಅದಕ್ಕೆ ಮತ ಕೊಡದಿರಿ. ದೇಶದ ಸುರಕ್ಷತೆಗಾಗಿ ಪ್ರಧಾನಿ ಮೋದಿ ಸರ್ಕಾರ ಪಿಎಫ್ಐ ಅನ್ನು ಬ್ಯಾನ್ ಮಾಡಿದೆ. ಆದರೆ, ಕಾಂಗ್ರೆಸ್ ಪಿಎಫ್ಐ ಮೇಲಿನ ಪ್ರಕರಣ ವಾಪಸ್ ಪಡೆದಿತ್ತು. ದಶಕಗಳಿಂದ ಕಾಂಗ್ರೆಸ್ ಅಳಿದರೂ ಯಾವುದೇ ಕೆಲಸ ಮಾಡಲಿಲ್ಲ. ಹಾಗೆ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಪಾಕಿಸ್ತಾನದವರು ಹಲವು ಬಾರಿ ದಾಳಿ ಮಾಡಿದ್ರೂ ತುಟಿ ಬಿಚ್ಚಲಿಲ್ಲ. ಮೋದಿಜಿ ಸರಕಾರವು ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಟ್ಟರು ಎಂದು ಹೇಳಿದರು.
ಬಳ್ಳಾರಿ ಮಾತ್ರವಲ್ಲದೆ, ರಾಜ್ಯಕ್ಕೆ ಗರಿಷ್ಠ ಅನುದಾನವನ್ನು ನೀಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿಯಡಿ 6 ಸಾವಿರ ಕೊಡಲಾಗಿದೆ. ಯಡಿಯೂರಪ್ಪ- ಬೊಮ್ಮಾಯಿ ಸರಕಾರವು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.
ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಸಂಸದರಾದ ದೇವೇಂದ್ರಪ್ಪ, ಕರಡಿ ಸಂಗಣ್ಣ, ಪಕ್ಷದ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.