ನವದೆಹಲಿ, ಫೆ 23 (DaijiworldNews/DB): ನರೇಂದ್ರ ದಾಮೋದರ್ ದಾಸ್ ಮೋದಿ ಹೇಳುವ ಬದಲಾಗಿ ನರೇಂದ್ರ ಗೌತಂದಾಸ್ ಮೋದಿ ಎಂದ ಕಾರಣಕ್ಕಾಗಿ ಬಂಧಿಸಲ್ಪಟ್ಟ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಮಧ್ಯಂತರ ಜಾಮೀನು ದೊರೆತಿದೆ.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಖೇರಾ ಅವರಿಗೆ ಮಧ್ಯಂತರ ಜಾಮೀನು ನೀಡುವಂತೆ ದೆಹಲಿ ಹೈಕೋರ್ಟ್ಗೆ ಸೂಚಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ಸೂಚನೆ ನೀಡಿದರು.
ಹಿರಿಯ ವಕೀಲ ಎಎಸ್ ಸಿಂಘ್ವಿ ಅವರು ಖೇರಾ ಪರ ವಾದ ಮಂಡಿಸಿದರು. ಇನ್ನು ಅಸ್ಸಾಂ ಮತ್ತು ಉತ್ತರ ಪ್ರದೇಶದ ಲಕ್ನೋ ಹಾಗೂ ವಾರಣಾಸಿಯಲ್ಲಿ ತಮ್ಮ ವಿರುದ್ದ ದಾಖಲಾಗಿರುವ ವಿವಿಧ ಎಫ್ಐಆರ್ಗಳನ್ನು ಏಕೀಕರಿಸುವಂತೆ ಕೋರಿ ಖೇರಾ ಅವರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ತಮ್ಮ ಹೇಳಿಕೆ ಕುರಿತು ಖೇರಾ ಕ್ಷಮೆ ಯಾಚನೆ ಮಾಡಿದ್ದಾರೆ ಎಂದು ಸಿಂಘ್ವಿ ಹೇಳಿದರು.
ರಾಯ್ಪುರಕ್ಕೆ ತೆರಳುತ್ತಿದ್ದ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ಖೇರಾ ಅವರನ್ನು ಅಸ್ಸಾಂ ಪೊಲೀಸರು ನಿನ್ನೆ ಬಂಧಿಸಿದ್ದರು. ಅಲ್ಲದೆ ಅವರ ವಿರುದ್ದ ಅಸ್ಸಾಂನ ವಿವಿಧೆಡೆ ಪ್ರಕರಣಗಳು ದಾಖಲಾಗಿದ್ದವು.