ಕೋಝಿಕ್ಕೋಡ್, ಫೆ 24 (DaijiworldNews/DB): ಮಹಿಳೆಯೊಬ್ಬರಿಗೆ ವೈದ್ಯರು ಎಡಗಾಲಿನ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ನಡೆಸಿದ ಆಘಾತಕಾರಿ ಘಟನೆ ಕೋಝಿಕ್ಕೋಡ್ ರಾಷ್ಟ್ರೀಯ ಆಸ್ಪತ್ರೆಯಲ್ಲಿ ನಡೆದಿದೆ.
ಕೋಝಿಕ್ಕೋಡ್ ಬಳಿಯ ಕಕ್ಕೋಡಿ ನಿವಾಸಿ ಸಜ್ನಾ ಎಂಬ 60 ವರ್ಷದ ಮಹಿಳೆ ಬಿದ್ದು ಎಡ ಮೊಣಕಾಲಿಗೆ ಗಂಭೀರ ಗಾಯಗೊಂಡಿದ್ದರು. ಇದಕ್ಕಾಗಿ ಅವರು ಕಳೆದೊಂದು ವರ್ಷದಿಂದ ನ್ಯಾಷನಲ್ ಆಸ್ಪತ್ರೆಯ ಆರ್ಥೋ ವಿಭಾಗದ ಮುಖ್ಯಸ್ಥ ಪಿ.ಬೆಹಿರ್ಶನ್ ಅವರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇನ್ನು ಶಸ್ತ್ರಚಿಕಿತ್ಸೆ ನಡೆಸಿದರೆ ನೋವು ಬೇಗ ಶಮನವಾಗುತ್ತದೆ ಎಂದು ವೈದ್ಯರು ಹೇಳಿದ ಹಿನ್ನೆಲೆಯಲ್ಲಿ ಅವರು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಸಜ್ನಾ ಕುಟುಂಬಸ್ಥರಿಗೆ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿರುವುದಾಗಿ ತಿಳಿಸಿದ್ದಾರೆ.
ಆದರೆ ಮರುದಿನ ಬೆಳಗ್ಗೆ ಮಹಿಳೆಗೆ ಪ್ರಜ್ಞೆ ಬಂದಾಗ ಗಾಯಗೊಂಡಿದ್ದ ಎಡಗಾಲಿನ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿರುವುದು ಗೊತ್ತಾಗಿದೆ. ಇದನ್ನು ಕೂಡಲೇ ಕುಟುಂಬಸ್ಥರು ವೈದ್ಯರ ಗಮನಕ್ಕೆ ತಂದಿದ್ದು, ಈ ವೇಳೆ ಬಲಗಾಲಿಗೂ ಗಾಯವಾಗಿದೆ ಎಂಬುದಾಗಿ ವೈದ್ಯ ಸಬೂಬು ಹೇಳಿದ್ದಾನೆ. ವೈದ್ಯನ ನಿರ್ಲಕ್ಷ್ಯದ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಕುಟುಂಬಿಕರು ಮಾತನಾಡಿದ್ದಾರೆ. ವೈದ್ಯರಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿವರಣೆ ಹೇಳದೆ ತಲೆ ತಗ್ಗಿಸಿ ಕುಳಿತಿದ್ದಾರೆ. ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಸಜ್ನಾ ಪುತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನು ತಪ್ಪಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ. ಬೆಹಿರ್ಶನ್ ವಿರುದ್ದ ನಿರ್ಲಕ್ಷ್ಯದ ಚಿಕಿತ್ಸೆಗಾಗಿ ಐಪಿಸಿ ಸೆಕ್ಷನ್ 336 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.