ಶಿಲ್ಲಾಂಗ್, ಫೆ 24 (DaijiworldNews/DB): ಟಿಎಂಸಿಯು ಬಿಜೆಪಿಯೊಂದಿಗೆ ಕೈ ಜೋಡಿಸಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಟಿಎಂಸಿಯೇ ರಾಷ್ಟ್ರೀಯ ಪರ್ಯಾಯ ಎಂದು ಘೋಷಿಸಿದ್ದಾರೆ.
ಉತ್ತರ ಶಿಲ್ಲಾಂಗ್ನ ತೃಣಮೂಲ ಅಭ್ಯರ್ಥಿ ಎಲ್ಗಿವಾ ಗ್ವಿನೆತ್ ರಿಂಜಾ ಪರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನಾವು ಜನರಿಗೆ ಪರ್ಯಾಯ ಒದಗಿಸುತ್ತಿದ್ದೇವೆ. ಬಿಜೆಪಿಗೆ ನಾವೇ ರಾಷ್ಟ್ರೀಯ ಪರ್ಯಾಯ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷವು ಪ್ರತಿ ಚುನಾವಣೆಯಲ್ಲಿಯೂ ಒಂದೊಂದೇ ರಾಜ್ಯವನ್ನು ಕಳೆದುಕೊಳ್ಳುತ್ತಿದೆ. ಆ ಪಕ್ಷ ಹೀಗೇ ಮುಂದುವರಿದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಬಿಜೆಪಿ ಗೆಲುವನ್ನು ನೋಡಲು ನಾವು ಮನೆಯಲ್ಲಿ ಕುಳಿತುಕೊಳ್ಳಬೇಕೇ ಎಂದು ಅವರು ಪ್ರಶ್ನಿಸಿದರು.
ದೇಶದಲ್ಲಿ ಅಮೂಲಾಗ್ರ ಬದಲಾವಣೆ ತರುವ ಶಕ್ತಿ, ಸಾಮರ್ಥ್ಯ ನಮ್ಮಲ್ಲಿದೆ. ಮಹಿಳೆಯರು ಈ ಬಗ್ಗೆ ಯೋಚಿಸಬೇಕು. ಎಲ್ಗಿವಾ ಗೆಲುವಿನಿಂದ ಟಿಎಂಸಿ ಗೆಲ್ಲುತ್ತದೆ. ಆ ಮೂಲಕ ಪಕ್ಷ ದೇಶೀಯ ಮಟ್ಟದಲ್ಲಿಯೂ ಗೆಲುವು ದಾಖಲಿಸಲು ಇದು ಅಡಿಗಲ್ಲಾಗುತ್ತದೆ ಎಂದು ಪ್ರತಿಪಾದಿಸಿದರು.
ಪಶ್ಚಿಮ ಬಂಗಾಳದ ಆಡಳಿತರೂಢ ಟಿಎಂಸಿ ಪಕ್ಷವು ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಾಯ ಮಾಡಲು ಪೂರಕವಾಗಿ ನಡೆದುಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.