ನವದೆಹಲಿ, ಫೆ 24 (DaijiworldNews/DB): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ಧಾರಗಳ ಮೇಲೆ ಯಾವುದೇ ಪ್ರಭಾವ ಬೀರಬಾರದು ಎಂಬ ಕಾರಣಕ್ಕಾಗಿ ಛತ್ತೀಸ್ಗಢದ ರಾಯ್ಪುರದಲ್ಲಿ ಇಂದು ನಡೆಯುವ ಕಾಂಗ್ರೆಸ್ನ ಪ್ರಮುಖ ಸಮೀಕ್ಷೆ ಸಭೆಗೆ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಗೈರಾಗಲಿದ್ದಾರೆ.
ಈ ಸಂಬಂಧ ಸುದ್ದಿಸಂಸ್ಥೆಯೊಂದಕ್ಕೆ ಕಾರ್ಯಕಾರಿ ಸಮಿತಿಯ ಮೂಲಗಳು ಮಾಹಿತಿ ನೀಡಿದ್ದು, ಚುನಾವಣೆ ಸಂಬಂಧ ಮಹತ್ವದ ಚರ್ಚೆ ಈ ಸಭೆಯಲ್ಲಿ ನಡೆಯಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗೂ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಖರ್ಗೆ ಅವರ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರಬಾರು. ಈ ನಿಟ್ಟಿನಲ್ಲಿ ಸಭೆಯಿಂದ ದೂರವುಳಿಯುವುದಾಗಿ ಗಾಂಧಿ ಕುಟುಂಬ ಹೇಳಿಕೊಂಡಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ನ 85ನೇ ಸಂಪುಟ ಸಭೆ ಇದಾಗಿದ್ದು, ಮೂರು ದಿನ ಅಧಿವೇಶನ ನಡೆಯಲಿದೆ. ಗಾಂಧಿ ಕುಟುಂಬದ ನಾಯಕರಿಲ್ಲದೆ ಇದೇ ಮೊದಲ ಬಾರಿಗೆ ಖರ್ಗೆ ನಾಯಕತ್ವದಲ್ಲಿ ಸಭೆ ನಡೆಯುತ್ತಿದೆ. ಲೋಕಸಭಾ ಚುನಾವಣೆಗೆ ಚುನಾವಣಾ ಮಾರ್ಗಸೂಚಿ ರೂಪಿಸಲು ಈ ಸಭೆ ಮಹತ್ವದ್ದಾಗಿದೆ. ಇನ್ನು ಇತರ ವಿಪಕ್ಷಗಳನ್ನು ಒಗ್ಗೂಡಿಸಿಕೊಂಡು ಚುನಾವಣೆಗೆ ತಯಾರಾಗುವುದು, ಆ ಮೂಲಕ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲಾಗುತ್ತದೆ. ಸುಮಾರು 15,000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯೂ ಇದೆ ಎನ್ನಲಾಗಿದೆ.
ಇನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗುರುವಾರ ಪ್ರತಿಕ್ರಿಯಿಸಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂವಹನಗಳ ಉಸ್ತುವಾರಿ ಜೈರಾಂ ರಮೇಶ್, ಶುಕ್ರವಾರ ಸ್ಟೀರಿಂಗ್ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಅದಕ್ಕೂ ಮುನ್ನ ಏನನ್ನೂ ಹೇಳಲಾಗುವುದಿಲ್ಲ ಎಂದಿದ್ದರು.