ಕೊಹಿಮಾ, ಫೆ 24 (DaijiworldNews/DB): ಕಾಂಗ್ರೆಸ್ ಪಕ್ಷವು ಈಶಾನ್ಯ ರಾಜ್ಯಗಳನ್ನು ಮತದ ಎಟಿಎಂಗಳನ್ನಾಗಿ ಬಳಸಿಕೊಂಡಿದೆ. ಆದರೆ ಬಿಜೆಪಿ ಪಾಲಿಗೆ ಈ ರಾಜ್ಯಗಳು ಅಷ್ಟಲಕ್ಷ್ಮಿಯಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಾಗಾಲ್ಯಾಂಡ್ ದಿಮಾಪುರದ ಚುಮುಕೆಡಿಮಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಈ ರಾಜ್ಯಗಳನ್ನು ಕಾಂಗ್ರೆಸ್ ದೂರದ ದೆಹಲಿಯಿಂದ ನಿಯಂತ್ರಿಸುತ್ತದೆ. ಆದರೆ ಬಿಜೆಪಿ ಅಷ್ಟಲಕ್ಷ್ಮಿಗಳಾಗಿಯೇ ಪರಿಗಣಿಸುತ್ತದೆ. ಕ್ಷೇತ್ರದ ಅಭಿವೃದ್ದಿಗಾಗಿ ನೀಡಿದ ಹಣವನ್ನು ಕಾಂಗ್ರೆಸ್ ಪೋಲು ಮಾಡಿದೆ ಎಂದು ಹರಿಹಾಯ್ದರು.
ಈಶಾನ್ಯ ರಾಜ್ಯಗಳ ಕ್ಷಿಪ್ರ ಅಭಿವೃದ್ದಿಯೇ ನಮ್ಮ ಮೂಲಮಂತ್ರ. ಶಾಂತಿ, ಪ್ರಗತಿ, ಸಮೃದ್ದಿಯೆಂಬ ಮಂತ್ರಗಳೊಂದಿಗೆ ಇಲ್ಲಿ ಪ್ರಗತಿದಾಯಕ ಕೆಲಸಗಳಿಗೆ ನಾವು ಅಣಿಯಾಗಿದ್ದೇವೆ. ನಾಗಾಲ್ಯಾಂಡ್ ಸರ್ಕಾರವನ್ನು ಕಾಂಗ್ರೆಸ್ ದೆಹಲಿಯಿಂದಲೇ ರಿಮೋಟ್ ಕಂಟ್ರೋಲ್ ಮಾಡುತ್ತಿತ್ತು. ಆದರೆ ನಮ್ಮ ಸರ್ಕಾರ ಈ ರಾಜ್ಯಗಳ ದಿಕ್ಕನ್ನು ಸಮರ್ಥವಾಗಿ ಅಭಿವೃದ್ದಿಯೆಡೆಗೆ ಬದಲಾಯಿಸಲಿದೆ ಎಂದರು.
ಸರ್ಕಾರದ ಹಣವನ್ನು ನಾವು ಸಾರ್ವಜನಿಕರಿಗಾಗಿ ನೀಡಿದೆವು. ಆದರೆ ಭ್ರಷ್ಟ ಪಕ್ಷಗಳು ಅವುಗಳನ್ನು ತಮ್ಮ ಬೊಕ್ಕಸಕ್ಕೆ ಹಾಕಿಕೊಂಡಿವೆ. ನಾಗಾಲ್ಯಾಂಡ್ನೆಡೆಗೆ ತಿರುಗಿಯೂ ನೋಡುವ ಕೆಲಸವನ್ನು ದೆಹಲಿಯ ಕಾಂಗ್ರೆಸ್ ನಾಯಕರು ಮಾಡುತ್ತಿಲ್ಲ. ಈ ರಾಜ್ಯದ ಅಭಿವೃದ್ದಿ ಅವರಿಗೆ ಬೇಕಾಗಿಲ್ಲ. ಆದರೆ ಈಶಾನ್ಯ ರಾಜ್ಯಗಳ ಅಭಿವೃದ್ದಿಗೆ ನಾವು ಹಗಲಿರುಳು ಶ್ರಮಿಸುತ್ತೇವೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.