ವಿಜಯಪುರ, ಫೆ 24 (DaijiworldNews/DB): ಎಲ್ಒಸಿ ಬಿಡುಗಡೆಗೆ ನಾನಾಗಲೀ, ಎಂ.ಬಿ. ಪಾಟೀಲ್ ಅವರಾಗಲೀ ಚಿಕ್ಕಾಸೂ ಲಂಚ ಪಡೆದಿಲ್ಲ. ಒಂದು ವೇಳೆ ಲಂಚ ಪಡೆದಿರುವುದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ ಇದೆ. ಲೂಟಿ ಹೊಡೆಯುವುದೇ ಅದರ ಕೆಲಸವಾಗಿದೆ. ಗುತ್ತಿಗೆದಾರರಿಂದ ನಯಾ ಪೈಸೆ ಪಡೆದುಕೊಳ್ಳದೆ ಬಿಲ್ ತೆರವು ಮಾಡುತ್ತಿದ್ದೆವು. ಆದರೆ ಬೊಮ್ಮಾಯಿ ಸರ್ಕಾರ ಶೇ. 40 ಕಮಿಷನ್ ನೀಡದೇ ಯಾವುದೇ ಬಿಲ್ ಕ್ಲಿಯರ್ ಮಾಡುತ್ತಿಲ್ಲ ಎಂದು ಹರಿಹಾಯ್ದರು.
ಎಂ.ಬಿ. ಪಾಟೀಲ್ ಅವರು ನಮ್ಮ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಗೆಲ್ಲಿಸಿದರೆ ನಿಮಗೆ ಇಂತಹ ಮಂತ್ರಿ ಸಿಗಲು ಸಾಧ್ಯ. ನಾನಾಗಲೀ, ಎಂ.ಬಿ. ಪಾಟಈಲ್ ಅವರಾಗಲೀ ಎಲ್ಒಸಿ ಬಿಡುಗಡೆಗೆ ಒಂದೇ ಒಂದು ಪೈಸೆ ಹಣವನ್ನು ಲಂಚವಾಗಿ ಮುಟ್ಟಿಲ್ಲ. ಒಂದು ವೇಳೆ ಲಂಚ ಪಡೆದಿರುವುದೇ ಆದಲ್ಲಿ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದರು.
ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರ ಇಲ್ಲಸಲ್ಲದ ಆಪಾದನೆಗಳನ್ನು ಹೊರಿಸುವುದರಲ್ಲೇ ಕಾಲ ಕಳೆಯುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲದಾಗಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.