ತಿರುವನಂತಪುರಂ, ಫೆ 24 (DaijiworldNews/DB): ಕೋಝಿಕೋಡ್ನಿಂದ ದಮ್ಮಾಮ್ಗೆ ಸುಮಾರು 168 ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತಿರುವಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಬೆಳಗ್ಗೆ 9.44 ರ ಸುಮಾರಿಗೆ ವಿಮಾನವು ಕ್ಯಾಲಿಕಟ್ ಕರಿಪುರ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗಿದೆ. ಆದರೆ ಕೆಲವೇ ಸಮಯದಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಕೂಡಲೇ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಮಾಹಿತಿ ರವಾನಿಸಲಾಯಿತು. ಮಾಹಿತಿ ಲಭಿಸಿದ ಕೂಡಲೇ ವಿಮಾನ ತುರ್ತು ಭೂಸ್ಪರ್ಶಕ್ಕಾಗಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ಅಲ್ಲದೆ ಒಂದು ವೇಳೆ ಭೂಸ್ಪರ್ಶದ ವೇಳೆ ಅಗ್ನಿ ಅನಾಹುತಗಳೇನಾದರೂ ಸಂಭವಿಸಿದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು.
ಅಲ್ಲದೆ ಭೂಸ್ಪರ್ಶದ ವೇಳೆ ಅವಘಡಗಳು ಘಟಿಸದಂತೆ ತಡೆಯುವ ಸಲುವಾಗಿ ವಿಮಾನದಲ್ಲಿದ್ದ ಹೆಚ್ಚುವರಿ ಇಂಧನವನ್ನು ಸಮುದ್ರಕ್ಕೆ ಸುರಿಯಲಾಗಿದೆ. ಇನ್ನು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.
ವಿಮಾನ ಟೇಕಾಫ್ ಆಗುವ ವೇಳೆ ಹಿಂಭಾಗವು ರನ್ ವೇಗೆ ತಾಗಿದ್ದು, ಇದರಿಂದಲೇ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎನ್ನಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೂ ಯಾವುದೇ ತೊಂದರೆಗಳಿಲ್ಲದೆ ಪಾರಾಗಿದ್ದಾರೆ.