ನವದೆಹಲಿ, ಫೆ 24 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅನಾಗರಿಕ ಶಬ್ದ ಪ್ರಯೋಗ ಮಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ ಇದೀಗ ಬೇಷರತ್ ಕ್ಷಮೆ ಯಾಚಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ಅವರು, ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಮಾತನಾಡುವ ಮೊದಲು ಆ ಸ್ಥಳದ ಪಾವಿತ್ರ್ಯತೆಯನ್ನು ತಿಳಿದುಕೊಳ್ಳಬೇಕು. ಅನಾಗರಿಕ ಶಬ್ದ ಪ್ರಯೋಗಿಸಿ ಸ್ಥಳದ ಪಾವಿತ್ರ್ಯತೆಗೆ ಭಂಗ ತರಬಾರದು. ಕಾನೂನು ಯಾವಾಗಲೂ ಮೇಲೆಯೇ. ಆರೋಪಿಯು ತನ್ನ ಶಬ್ದ ಬಳಕೆಗಾಗಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ ಎಂದಿದ್ದಾರೆ.
ಗೌತಮ್ ಅದಾನಿ ಷೇರು ಕುಸಿತ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಪ್ರಧಾನಿ ನರೇಂದ್ರ ಮೋದಿಯವರನ್ನು ನರೇಂದ್ರ ದಾಮೋದರ್ ದಾಸ್ ಅಲ್ಲ, ನರೇಂದ್ರ ಗೌತಮದಾಸ್ ಮೋದಿ ಎಂದು ಜರೆದಿದ್ದರು. ಈ ಸಂಬಂಧ ಫೆಬ್ರವರಿ 23ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಕೆಳಗಿಳಿಸಿ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ಬಳಿಕ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.