ಬೆಂಗಳೂರು, ಫೆ 24 (DaijiworldNews/DB): ಮಾಜಿ ಸಿಎಂ ಬಿಎಸ್ವೈ ಅವರೊಂದಿಗೆ ನನಗೆ ಮೈಮನಸ್ಸು ಆಗಿರಬಹುದು. ಆದರೆ ಪಕ್ಷ ಕಟ್ಟಲು ಅವರು ಮತ್ತು ಅನಂತ್ಕುಮಾರ್ ಮಾಡಿದ ಕೆಲಸ ಕೃಷ್ಣ ಮತ್ತು ಅರ್ಜುನರ ಕೆಲಸದಂತಿತ್ತು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶುಕ್ರವಾರ ಕೊನೆಗೊಂಡ 15ನೇ ವಿಧಾನಸಭಾ ಅಧಿವೇಶನದಲ್ಲಿ ಬಿಎಸ್ವೈ ವಿರುದ್ದ ಇದ್ದ ವೈಮನಸ್ಸು ಮರೆತು ಮಾತನಾಡಿದ ಅವರು, ಯಡಿಯೂರಪ್ಪನವರು ನಮ್ಮ ಪಕ್ಷದ ಹಿರಿಯರು. ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಲು ಅವರು ಮತ್ತು ಅನಂತ್ಕುಮಾರ್ ಮಾಡಿದ ಕೆಲಸ ಸಣ್ಣದಲ್ಲ. ಕೃಷ್ಣಾರ್ಜುನರಂತೆ ಅವರು ಅವಿರತ ಶ್ರಮಿಸಿದ್ದರು ಎಂದು ಸ್ಮರಿಸಿದರು.
ಆಯಾ ರಾಮ್ ಗಯಾ ರಾಮ್ ಎಂಬಂತೆ ಆ ಬದಿಯವರು ಈ ಬದಿಗೆ, ಈ ಬದಿಯವರು ಆ ಬದಿಗೆ ಹೋಗುತ್ತಾರೆ. ಆದರೆ ಯಡಿಯೂರಪ್ಪ ಅವರು ಮಾತ್ರ ಗಟ್ಟಿಯಾಗಿ ನಿಂತಿದ್ದಾರೆ ಎಂದು ಇದೇ ವೇಳೆ ಹೇಳಿದರು.
ಆಡಳಿತ ಪಕ್ಷದಲ್ಲಿರುವ ವಿಪಕ್ಷ ಸದಸ್ಯನಾಗಿ ನಾನು ಕೆಲಸ ಮಾಡಿದ್ದೇನೆ. ವಿಜಯಪುರ ಅಭಿವೃದ್ದಿಗೆ ಸಿಎಂ ಬೊಮ್ಮಾಯಿ ಸಹಿತ ಹಲವು ಸಚಿವರು ನನಗೆ ಅವಕಾಶ ಕಲ್ಪಿಸಿದ್ದಾರೆ. ಇದಕ್ಕೆ ನಾನು ಎಲ್ಲರಿಗೂ ಆಭಾರಿ ಎಂದರು.