ಬೆಂಗಳೂರು, ಫೆ. 24 (DaijiworldNews/SM): ರಾಜ್ಯದಲ್ಲಿ ರೈತ ಮುಖಂಡ, ಹೋರಾಟಗಾರರಾಗಿಯೇ ಗುರಿತಿಸಿಕೊಂಡಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ರಾಜಕೀಯ ನಿವೃತ್ತಿಯ ಸನಿಹದಲ್ಲಿದ್ದಾರೆ. ಇದು ಅವರ ಕೊನೆಯ ಅವಧಿ ಹಾಗೂ ವಿಧಾನಸಭೆ ಕಲಾಪದಲ್ಲಿ ಕೊನೆಯ ಮಾತು. ವಿದಾಯದ ಮಾತುಗಳೊಂದಿಗೆ 15ನೇ ವಿಧಾನಸಭೆಯ ಕೊನೆಯ ಅಧಿವೇಶನ ಸಮಪ್ತಿಗೊಂಡಿದೆ.
ಇಂದು ವಿಧಾಸಭೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ವಿದಾಯ ಭಾಷಣ ಮಾಡಿದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು ಮುಂದೂಡಿದರು.
ಇಂದು ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ವೈ, ದೇವೇಗೌಡರು ನಮಗೆ ಆದರ್ಶ. ಅವರನ್ನು ನೋಡಿ ಕಲಿಯುವಂತದ್ದು ತುಂಬಾ ಇದೆ. ಈ ವಯಸ್ಸಿನಲ್ಲೂ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡುತ್ತಾರೆ, ಚಿಂತನೆ ಮಾಡುತ್ತಾರೆ. ಅವರು ನಮಗೆ ಆದರ್ಶ ಎಂದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಎಟಿ ರಾಮಸ್ವಾಮಿ ಸೇರಿದಂತೆ ಹಲವರು ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಈ ಸದನದವನ್ನು ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಯಶಸ್ವಿಯಾಗಿ ನಡೆಸಿದ್ದಾರೆ. ನೀವು ಮುಂದಿನ ಬಾರಿ ಮಂತ್ರಿಯಾಗಿ ಇಲ್ಲಿ ಕೂರಬೇಕು. ಇಲ್ಲಿ ಮಹಿಳೆಯರು ಹೆಚ್ಚು ಆಯ್ಕೆ ಆಗಬೇಕು ಎಂದು ಹೇಳಿದರು.
ಇದೇ ವೇಳೆ ಶಿಕಾರಿಪುರದ ಜನರಿಗೆ ಧನ್ಯವಾದ ಹೇಳಿದ ಯಡಿಯೂರಪ್ಪ, ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಫೆಬ್ರವರಿ 27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಹುಟ್ಟು ಹಬ್ಬಕ್ಕೆ ಬರಲಿದ್ದಾರೆ. ಅಂದೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ ಎಂದರು.