ಶ್ರೀನಗರ, ಫೆ 25 (DaijiworldNews/DB): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ಡಿಪಿಎಪಿ ಅಧ್ಯಕ್ಷ ಗುಲಾಂ ನಬಿ ಆಜಾದ್ ಲೀಗಲ್ ನೋಟಿಸ್ ಕಳುಹಿಸಲಾಗಿದ್ದು, 2 ಕೋಟಿ ರೂ. ಪರಿಹಾರ ಕೇಳಲಾಗಿದೆ. ಗುಲಾಮ, ಮೀರ್ ಜಾಫರ್ ಮತ್ತು ವೋಟ್ ಕಟರ್ ಎಂದು ಕರೆದಿದ್ದಾಕ್ಕಾಗಿ ಈ ನೋಟಿಸ್ ಕಳುಹಿಸಲಾಗಿದೆ.
ಆಜಾದ್ ಅವರ ಕಾನೂನು ಸಲಹೆಗಾರ ನರೇಶ್ಕುಮಾರ್ ಗುಪ್ತಾ ಅವರ ಮೂಲಕ ನೋಟಿಸ್ ಕಳುಹಿಸಲಾಗಿದೆ. ಕಳಂಕರಹಿತ ಪ್ರತಿಷ್ಠೆಗೆ ಹಾನಿ ಉಂಟು ಮಾಡಿದ್ದಕ್ಕಾಗಿ ಪರಿಹಾರ ಕೋರಿರುವುದಾಗಿ ನೋಟಿಸ್ನಲ್ಲಿ ತಿಳಿಸಲಾಗಿದೆ.
ಟ್ವಿಟರ್ ಖಾತೆಯಲ್ಲಿ ಆಜಾದ್ ಅವರ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ. ಘನತೆ, ಗೌರವಕ್ಕೆ ಕುಂದುಂಟು ಮಾಡಲಾಗುತ್ತಿದೆ. ಗುಲಾಂ ಪದವನ್ನು ಗುಲಾಮ ಎಂಬರ್ಥದಲ್ಲಿ ಬಳಸಿ ರಮೇಶ್ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ನೋಟಿಸ್ ಸ್ವೀಕರಿಸಿದ ದಿನದಿಂದ ಎರಡು ವಾರಗಳೊಳಗಾಗಿ ಮಾಧ್ಯಮಗಳ ಮೂಲಕ ಜೈರಾಮ್ ರಮೇಶ್ ಅವರು ಆಜಾದ್ ಅವರ ಕ್ಷಮೆ ಯಾಚನೆ ಮಾಡಬೇಕೆಂದು ಗುಪ್ತಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.