ಇಂದೋರ್, ಫೆ 25 (DaijiworldNews/DB): ಹಿರಿಯ ವಿದ್ಯಾರ್ಥಿ ಹಚ್ಚಿದ್ದ ಬೆಂಕಿಯಿಂದ ಬೆಂದು ಹೋಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಇಂದೋರ್ನ ಪ್ರಾಂಶುಪಾಲೆ ವಿಮುಕ್ತಾ ಶರ್ಮಾ ಇಂದು ಮೃತಪಟ್ಟಿದ್ದಾರೆ.
ಇಂದೋರ್ನ ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ವಿಮುಕ್ತಾ ಶರ್ಮಾ (54) ಅವರಿಗೆ ಅದೇ ಕಾಲೇಜಿನ ಮಾಜಿ ವಿದ್ಯಾರ್ಥಿ ಆಶುತೋಶ್ ಶ್ರೀವಾತ್ಸವ್ (24) ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಕಿ ಹಚ್ಚಿದ್ದ. ಶೇ.70ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ಪ್ರಾಂಶುಪಾಲೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಇಂದು ಮುಂಜಾನೆ ಅಸು ನೀಗಿದರು. ಇನ್ನು ಆರೋಪಿ ಅಶುತೋಶ್ಗೂ ಶೇ. 20ರಷ್ಟು ಸುಟ್ಟ ಗಾಯಗಳಾಗಿವೆ.
ಏನಿದು ಘಟನೆ?
ಪ್ರಾಂಶುಪಾಲೆ ವಿಮುಕ್ತಾ ಶರ್ಮಾ ಸೋಮವಾರ ಕಾಲೇಜು ಮುಗಿಸಿ ಮನೆಗೆ ತೆರಳಲು ಅಣಿಯಾಗುತ್ತಿದ್ದ ವೇಳೆ ಅಲ್ಲಿಗೆ ಬಂದ ಆರೋಪಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನೋವಿನಿಂದ ಚೀರುತ್ತಾ ಪ್ರಾಂಶುಪಾಲೆ ಕಾಲೇಜಿನ ಕಟ್ಟಡದೊಳಗೆ ಓಡಿದ್ದಾರೆ. ಕೂಡಲೇ ಅಲ್ಲಿದ್ದ ಸಹದ್ಯೋಗಿಗಳು ಬೆಂಕಿ ನಂದಿಸಿದ್ದಾರೆ. ಬೆಂಕಿ ಹಚ್ಚಿದ್ದ ಅಶುತೋಶ್ ಕೂಡಾ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ವಾಚ್ಮೇನ್ ತಡೆದದ್ದರಿಂದ ಆತನ ಪ್ರಯತ್ನ ವಿಫಲವಾಗಿತ್ತು. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.
ಇದೇ ಕಾಲೇಜಿನಲ್ಲಿ ಪದವಿ ಪಡೆದಿದ್ದ ಆರೋಪಿ ಕಾಲೇಜು ಮುಗಿಸಿದ್ದರೂ ಅಂಕಪಟ್ಟಿ ಆತನ ಕೈಸೇರಿರಲಿಲ್ಲ. 2022ರ ಜುಲೈನಲ್ಲಿ ಫಲಿತಾಂಶ ಬಂದಿದೆ. ಅಂಕಪಟ್ಟಿಗಾಗಿ ಹಲವು ಬಾರಿ ಮನವಿ ಮಾಡಿದರೂ ನೀಡದ್ದಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ಆರೋಪಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಇನ್ನು ಈತ ಏಳನೇ ಸೆಮಿಸ್ಟರ್ನಲ್ಲಿ ಅನುತ್ತೀರ್ಣಗೊಂಡಿದ್ದ. ಈ ಹಿಂದೆಯೂ ಈತನ ವಿರುದ್ದ ಎರಡ್ಮೂರು ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ ಎಂದು ಇಂದೋರ್ ಗ್ರಾಮಾಂತರದ ಪೊಲೀಸ್ ಅಧೀಕ್ಷಕ ಭಗವತ್ ಸಿಂಗ್ ವಿರ್ಡೆ ತಿಳಿಸಿದ್ದಾರೆ.