ಚಿಕ್ಕಮಗಳೂರು, ಫೆ 25 (DaijiworldNews/DB): ದೇಶ ಅಭಿವೃದ್ದಿಯಾಗಿರುವುದು ಕೇವಲ ಮೋದಿ, ಬಿಜೆಪಿಯಿಂದಲ್ಲ. ನೆಹರೂ ಕಾಲದಿಂದಲೂ ದೇಶ ಅಭಿವೃದ್ದಿಯಾಗುತ್ತಲೇ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೇರಿದ ಮೇಲಷ್ಟೇ ದೇಶ ಅಭಿವೃದ್ದಿಯಾಗಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಬಿಜೆಪಿ, ಮೋದಿ ಬಂದ ಮೇಲಷ್ಟೇ ದೇಶ ಅಭಿವೃದಿಯಾಗಿದ್ದಲ್ಲ. ನೆಹರೂ ಕಾಲದಿಂದಲೇ ಅಭಿವೃದ್ದಿಯಾಗುತ್ತಿದೆ. ನಾವು ಹುಟ್ಟುವುದಕ್ಕೆ ಮೊದಲೇ ದೇಶ ಅಭಿವೃದ್ದಿಯಾಗಿದೆ ಎಂದರು.
ಬಿಜೆಪಿಯವರು ನೂರು ಸುಳ್ಳು ಹೇಳುತ್ತಾರೆ, ಮೂರು ಕೆಲಸ ಮಾಡುತ್ತಾರೆ. ಚುನಾವಣೆ ದಿನಾಂಕ ಘೋಷಣೆ ಆಗುವವರೆಗೂ ಅಭಿವೃದ್ದ ಕೆಲಸಕ್ಕೆ ಸರ್ಕಾರ ತೊಡಗಿಸಿಕೊಳ್ಳಬಹುದು. ಚುನಾವಣಾ ಸಮಯದ ಬಜೆಟ್ನ್ನು ಅವರು ಮಂಡಿಸಿದ್ದಾರೆ. ಸುಳ್ಳು ಹೇಳುವುದೇ ಅವರ ಅಭ್ಯಾಸವಾಗಿಬಿಟ್ಟಿದೆ ಎಂದು ಕಿಡಿ ಕಾರಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ ಕಳೆದ ಮೂರು ವರ್ಷಗಳಿಂದ ಇಂದ ಸರ್ಕಾರ ಭ್ರಷ್ಟಾಚಾರದಲ್ಲೇ ನಡೆದಿತ್ತಾ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವಾಗಿದೆ ಎನ್ನುವವರು ಸರ್ಕಾರ ಪತನಗೊಳಿಸಲು ಬಳಸಿದ ಹಣ ಯಾವುದೆಂದು ಹೇಳಬೇಕು. ಉಪ ಚುನಾವಣೆ ನಡೆದಿರುವುದು ಹೇಗೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದರು.