ನವದೆಹಲಿ, ಫೆ 25 (DaijiworldNews/DB): ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಮುಕ್ತಾಯವಾಗಬಹುದು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ಆ ಮೂಲಕ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ.
ಛತ್ತೀಸ್ಗಢದ ರಾಯ್ಪುರದಲ್ಲಿ ನಡೆದ ಕಾಂಗ್ರೆಸ್ 85ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, 2004 ಮತ್ತು 2009ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಅತ್ಯಪೂರ್ವ ಗೆಲುವು ಪಡೆದುಕೊಂಡಿದೆ. ಇದು ವೈಯಕ್ತಿಕವಾಗಿ ನನಗೆ ತುಂಬಾ ಖುಷಿ ಕೊಟ್ಟಿದೆ. ಇದೀಗ ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್ ಪಾಲಿಗೆ ಅತಿ ದೊಡ್ಡ ತಿರುವು. ಈ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಕೋಡಾ ಮುಕ್ತಾಯಗೊಳ್ಳಬಹುದು ಎಂಬುದೂ ನನಗೆ ಖುಷಿ ಕೊಡುವ ವಿಚಾರವಾಗಿದೆ ಎಂದರು.
ಬಿಜೆಪಿ, ಆರೆಸ್ಸೆಸ್ ದೇಶದಲ್ಲಿ ಪ್ರತಿ ಸ್ವತಂತ್ರ ಸಂಸ್ಥೆಗಳನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದೆ. ಆ ಮೂಲಕ ಇಡೀ ವ್ಯವಸ್ಥೆಗೇ ಹಾನಿಯುಂಟು ಮಾಡಿದೆ. ಕೆಲವೇ ಉದ್ಯಮಿಗಳಿಗೆ ದೇಶವನ್ನು ಅನುಕೂಲಕರವಾಗಿ ಮಾರ್ಪಡಿಸಿ ದೇಶದ ಆರ್ಥಿಕತೆಯನ್ನೂ ದಿಕ್ಕು ತಪ್ಪಿಸಿದ್ದಾರೆ. ದೇಶದ ವ್ಯವಸ್ಥೆ ಈ ರೀತಿಯ ಬುಡಮೇಲಾಗಿರುವುದು ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷ ಮತ್ತು ದೇಶಕ್ಕೆ ಸವಾಲಿನ ವಿಚಾರವಾಗಿದೆ. ಇದನ್ನು ಸರಿದಾರಿಗೆ ತರಬೇಕಾದ ಕೆಲಸವನ್ನು ಮಾಡಬೇಕಿದೆ ಎಂದರು.