ಬೆಂಗಳೂರು, ಫೆ 25 (DaijiworldNews/HR): ಬೆಂಗಳೂರಿನ ಸುಲ್ತಾನ್ ಪೇಟೆಯ ಬಳಿ ನಿರ್ಮಾಣ ಹಂತದ ಹೊಂಡಕ್ಕೆ ಬಿದ್ದು 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಮಗುವನ್ನು ಮಹೇಶ್ವರಿ ಎಂದು ಗುರುತಿಸಲಾಗಿದೆ.
ಆಕೆಯ ಪೋಷಕರು ಸುಲ್ತಾನ್ಪೇಟೆಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಆವರಣದಲ್ಲಿ ವಾಸಿಸುತ್ತಿದ್ದರು.
ಶುಕ್ರವಾರ ತಡರಾತ್ರಿ ಲಿಫ್ಟ್ ಅಳವಡಿಕೆಗಾಗಿ ಮಾಡಿದ್ದ ಹೊಂಡಕ್ಕೆ ಮಗು ಬಿದ್ದಿದ್ದು, ಹೊಂಡದಲ್ಲಿ ನೀರು ತುಂಬಿತ್ತು. ಇದನ್ನು ತಿಳಿಯದ ಮಗುವಿನ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಬೆಳಗ್ಗೆ ಶವ ಹೊರ ಬಂದಾಗ ಮಾತ್ರ ಮಗುವಿನ ವಿಚಾರ ತಿಳಿಯಿತು.
ಕಟ್ಟಡವು ವಿಕ್ರಮ್ ಎಂಬುವವರಿಗೆ ಸೇರಿತ್ತು. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕೆ.ಆರ್. ಮಾರ್ಕೆಟ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.