ಅಹಮದಾಬಾದ್, ಫೆ 25 (DaijiworldNews/DB): ಮದುವೆ ಶಾಸ್ತ್ರ ನಡೆಯುತ್ತಿದ್ದಾಗಲೇ ವಧು ಮೃತಪಟ್ಟ ಘಟನೆ ಗುಜರಾತ್ನ ಭಾವನಗರದಲ್ಲಿ ನಡೆದಿದೆ. ಆದರೆ ವಿವಾಹ ನಿಲ್ಲಬಾರದೆಂದು ಯೋಜಿಸಿದ ಕುಟುಂಬ ವಧುವಿನ ತಂಗಿಯನ್ನೇ ವರನಿಗೆ ಮದುವೆ ಮಾಡಿಸಿದ್ದಾರೆ.
ಜಿನಾ ಭಾಯ್ ರಾಥೋಡ್ ಎಂಬವರ ಪುತ್ರಿ ಹೇಟೆಲ್ ಅವರ ವಿವಾಹವನ್ನು ರಾಣಾಭಾಯ್ ಬುಟ್ಟಾ ಬಾಯ್ ಎಂಬವರ ಪುತ್ರ ವಿಶಾಲ್ ಅವರೊಂದಿಗೆ ನಿಶ್ಚಯಿಸಲಾಗಿತ್ತು. ಮದುವೆ ದಿನದಂದು ವಿವಿಧ ಶಾಸ್ತ್ರಗಳು ನಡೆಯುತ್ತಿರುವಾಗಲೇ ವಧುವಿಗೆ ಹೃದಯಾಘಾತವಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು. ಇದರಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಆವರಿಸಿತ್ತು.
ಇನ್ನು ಮದುವೆ ನಿಲ್ಲಿಸಬಾರದೆಂಬ ಕಾರಣಕ್ಕೆ ಅಲ್ಲಿ ಸೇರಿದ್ದ ಕೆಲವರು ವಧುವಿನ ತಂಗಿಯನ್ನು ವರನಿಗೆ ಕೊಟ್ಟು ವಿವಾಹ ಮಾಡಿಸುವಂತೆ ಕುಟುಂಬಿಕರಿಗೆ ಸಲಹೆ ಮಾಡಿದ್ದಾರೆ. ಅದರಂತೆ ಎರಡೂ ಕಡೆಯವರು ಮಾತುಕತೆ ನಡೆಸಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ವಧುವಿನ ಮೃತದೇಹವನ್ನು ಮದುವೆ ನಡೆಯುವವರೆಗೂ ಕೋಲ್ಡ್ ಸ್ಟೋರೇಜ್ನಲ್ಲಿ ಇರಿಸಿ ಮದುವೆ ನೆರವೇರಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.