ನವದೆಹಲಿ, ಫೆ 25 (DaijiworldNews/DB): ಉಕ್ರೇನ್ ಯುದ್ದವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಪರಿಹರಿಸಿಕೊಳ್ಳುವುದಕ್ಕೆ ಭಾರತ ಸಲಹೆ ಮಾಡುತ್ತಿದೆ. ಶಾಂತಿ ಪ್ರಕ್ರಿಯೆಗಳಿಗೆ ಭಾರತ ಸದಾ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜರ್ಮನ್ ಚಾನ್ಸಿಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ವಿಸ್ತೃತ ದ್ವಿಪಕ್ಷೀಯ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕೊರೊನಾ ಮತ್ತು ಉಕ್ರೇನ್ ಸಂಘರ್ಷದ ಪರಿಣಾಮ ಕೇವಲ ಆ ದೇಶಗಳಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ತಾಗಿದೆ. ಈ ಯುದ್ದದಿಂದಾಗಿ ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೂ ಕೆಟ್ಟ ಪರಿಣಾಮ ಉಂಟಾಗಿದೆ ಎಂದರು.
ಭಾರತ ಮತ್ತು ಜರ್ಮನ್ ಭಯೋತ್ಪಾದನೆ ಹಾಗೂ ಪ್ರತ್ಯೇಕವಾದದ ವಿರುದ್ದ ಹೋರಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಭಯೋತ್ಪಾದನೆಯನ್ನು ಮಟ್ಟ ಹಾಕಲು ಸೂಕ್ತ ಕ್ರಮ ಅಗತ್ಯ ಎಂಬುದು ಎರಡೂ ರಾಷ್ಟ್ರಗಳ ವಾದವಾಗಿದೆ ಎಂದು ಹೇಳಿದರು.
ಇನ್ನು ಜರ್ಮನ್ ಅಧ್ಯಕ್ಷ ಓಲಾಫ್ ಅವರು ಮಾತನಾಡಿ, ಉಕ್ರೇನ್ ಹಾಗೂ ರಷ್ಯಾದ ಯುದ್ದದಿಂದ ವಿಶ್ವವೇ ಹಲವಾರು ಇಳಿತಗಳನ್ನು ಕಂಡಿದೆ. ಹಿಂಸೆಯಿಂದ ಗಡಿ ಬದಲಾವಣೆ ಅಸಾಧ್ಯ. ಈ ಯುದ್ದದಿಂದ ಉಕ್ರೇನ್ನಲ್ಲಿ ಹಲವು ನಷ್ಟವಾಗಿದ್ದು, ದುರಂತ ಘಟನೆ ಇದು ಎಂದರು.