ನವದೆಹಲಿ, ಫೆ 26 (DaijiworldNews/DB): ಭಾರತೀಯ ಸೇನೆಯಲ್ಲಿ ನಡೆಯುತ್ತಿದ್ದ ಕೆಲವು ವಸಾಹತುಶಾಹಿ ಆಚರಣೆಗಳನ್ನು ರದ್ದುಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದ ಮೇರೆಗೆ ಈ ಆಚರಣೆಗಳನ್ನು ರದ್ದುಪಡಿಸಲಾಗಿದೆ.
ಹಿರಿಯ ಅಧಿಕಾರಿಗಳ ನಿವೃತ್ತಿ ಸಂದರ್ಭದಲ್ಲಿ ಬಳಸಲಾಗುತ್ತಿದ್ದ ಕುದುರೆಗಳಿಂದ ಎಳೆಯಲ್ಪಡುವ ಗಾಡಿಗಳ ಸೇವೆ, ವಾದ್ಯಗೋಷ್ಠಿ ಮುಂತಾದ ಆಚರಣೆಗಳನ್ನು ರದ್ದು ಪಡಿಸುವಂತೆ ಪ್ರಧಾನಿ ಕಚೇರಿಯಿಂದ ಸೇನೆಯ ಪ್ರಮುಖರಿಗೆ ಸಂದೇಶ ಕಳುಹಿಸಲಾಗಿತ್ತು. ಅಲ್ಲದೆ ಈ ಕುದುರೆ ಗಾಡಿ, ವಾದ್ಯಗಳನ್ನು ವಶಪಡಿಸಿಕೊಳ್ಳುವ ಕಾರ್ಯವೂ ನಡೆಯಲಿದೆ ಎಂದು ತಿಳಿದು ಬಂದಿದೆ.
ಕುದುರೆಗಾಡಿಗಳನ್ನು ಹಿರಿಯ ಅಧಿಕಾರಿಗಳು ನಿವೃತ್ತರಾಗುವ ಸಂದರ್ಭದಲ್ಲಿ ಇತರ ಅಧಿಕಾರಿಗಳು ಎಳೆಯುತ್ತಿದ್ದರು. ಕೆಲವು ತುಕಡಿಗಳಲ್ಲಿ ಈ ಆಚರಣೆ ಈಗಲೂ ನಡೆಯುತ್ತಿದೆ. ಅಲ್ಲದೆ ಕೆಲವು ಭೂ ಸೇನಾ ತುಕಡಿಗಳಲ್ಲಿದ್ದ ವಾದ್ಯ ಗೋಷ್ಠಿಗಳನ್ನೂ ಅನಗತ್ಯ ಆಚರಣೆ ಪಟ್ಟಿಗೆ ಸೇರಿಸಿ ರದ್ದುಪಡಿಸಲಾಗಿದೆ. ಇವುಗಳು ಶಾಶ್ವತವಾಗಿ ಮುಂದಿನ ದಿನಗಳಲ್ಲಿ ಬಳಕೆಯಲ್ಲಿ ಇರುವುದಿಲ್ಲ ಎಂದು ವರದಿಯಾಗಿದೆ.